ಐದು ಬಾರಿ ಮುಂದೂಡಲ್ಪಟ್ಟ ಕನ್ನಡದ ಜಾತ್ರೆ
ಬೆಂಗಳೂರು: ಐದು ಬಾರಿ ಮುಂದೂಡಲ್ಪಟ್ಟಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಈಗ ಮತ್ತೆ ಕೊರೊನ ಕರಿ ನೆರಳು ಆವರಿಸಿಕೊಂಡಿದೆ. ಮುಂಬರುವ ಜ.6 ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿಯೇ ಸಮ್ಮೇಳನ ನಡೆದಿಲ್ಲ. ಇದೀಗ ಮತ್ತೆ ಕೋವಿಡ್‌ನಿಂದಾಗಿ ಭೀತಿ ಎದುರಾಗಿದೆ. ಈ ಬಾರಿ ಕನಿಷ್ಠ ಮೂರು ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಸಂಘಟನಾ ಸಮಿತಿಗಳು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಈ ನಡುವೆ ಮತ್ತೊಂದು ಕೋವಿಡ್ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯ ಇಲಾಖೆ ಜನರಿಗೆ ಸೂಚಿಸಿದೆ.
ಕೊನೆಯ ಬಾರಿಗೆ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊರೊನಾ ಉಲ್ಭಣಗೊಳ್ಳುವ ಹಂತದಲ್ಲಿ ಕಲಬುರಗಿಯಲ್ಲಿ 2020ರಲ್ಲಿ ನಡೆದಿತ್ತು. 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021ರ ಜನವರಿಯಲ್ಲಿ ಆಯೋಜಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೋವಿಡ್ ಎರಡನೇ ಮತ್ತು ಮೂರನೇ ಅಲೆಗಳ ಕಾರಣ ಮುಂದೂಡಲಾಗಿತ್ತು. ನಂತರ ರಾಜ್ಯ ಸರ್ಕಾರ 2022ರ ಜನವರಿಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಘೋಷಿಸಿತ್ತು.
ಆದರೆ ಅಂದಿನಿಂದ, ಕೋವಿಡ್ ನಿರ್ಬಂಧಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಇದನ್ನು ಐದು ಬಾರಿ ಮುಂದೂಡಲಾಗಿದೆ. 2022ರ ಜನವರಿಯಿಂದ, ಮಾರ್ಚ್‌ಗೆ ಮತ್ತು ನಂತರ ಮೇ ತಿಂಗಳಿಗೆ ಮುಂದೂಡಲಾಯಿತು. ನಂತರ ಸೆ. 23ರಿಂದ 25ರವರೆಗೆ ನಡೆಯಲಿದೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದರೆ 2022ರ ನವೆಂಬರ್‌ವರೆಗೆ ಮುಂದೂಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ಕುಮಾರ್ ಅವರಿಗೆ ಪತ್ರ ಬರೆದಿದ್ದರು. ನ.2 ರಿಂದ 4 ರವರೆಗೆ ಜಾಗತಿಕ ಹೂಡಿಕೆದಾರರ ಸಭೆಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದರಿಂದ ಆಗಲೂ ಸೂಕ್ತವಲ್ಲ ಎಂದಾಯಿತು. ಈಗ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಡಿಸೆಂಬರ್ ಕೂಡ ಸ್ವೀಕಾರಾರ್ಹವಲ್ಲ ಎಂದು ಮುಂದಿನ ಜನವರಿಗೆ ತೀರ್ಮಾನಿಸಲಾಯಿತು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿವೆ. ಆದರೆ ಸಭೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಆದರೆ, ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮಾತ್ರ ಕೇಳಲಾಗಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.