ಕಟೀಲಿನಲ್ಲಿ ನಡೆದ ಪ್ರದರ್ಶನದಲ್ಲಿ ರಾತ್ರಿ 12ಕ್ಕೆ ನಡೆದ ಘಟನೆ
ಮಂಗಳೂರು : ಕಟೀಲು 4ನೇ ಮೇಳದ ಹಿರಿಯ ಕಲಾವಿದ ಗುರುವಪ್ಪ ಬಾಯಾರು (58) ಅವರು ಕಟೀಲಿನ ಸರಸ್ವತಿ ಸದನದಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸರಸ್ವತಿ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ರಂಗಸ್ಥಳದಲ್ಲಿ ನಿಂತಿದ್ದ ಗುರುವಪ್ಪ ಬಾಯಾರು ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ನಸುಕಿನ ಸುಮಾರು 12.15ರ ವೇಳೆಗೆ ಈ ಘಟನೆ ನಡೆದಿದೆ.