ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಪುತ್ತೂರು ಹಾಗೂ ಕಡಬ ತಾಲೂಕು ಕೇಂದ್ರ ಒಕ್ಕೂಟದ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಒಕ್ಕೂಟಗಳ ಸಾಧನ ಸಮಾವೇಶ ಡಿ. 23ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ಜರಗಿತು.
ಸ್ವ-ಸಹಾಯ ಸಂಘಗಳಿಗೆ ಸರ್ಕಾರದ ಸವಲತ್ತು
ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸ್ವಸಹಾಯ ಸಂಘ ಸೇರಿದಂತೆ ಪುತ್ತೂರಿನಲ್ಲಿ ಬಹಳಷ್ಟು ಸ್ವಸಹಾಯ ಸಂಘಗಳು ಕೆಲಸ ನಿರ್ವಹಿಸುತ್ತಿವೆ. ಇತ್ತೀಚೆಗೆ ಇಂತಹ ಸಂಘಗಳಿಗೆ ಸರ್ಕಾರದ ಸವಲತ್ತು ನೀಡುವ ಕೆಲಸವೂ ನಡೆಯುತ್ತಿದೆ. ಇಂತಹ ಸವಲತ್ತನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಜನರು ಇಂತಹ ಯೋಜನೆಗಳ ಸದುಪಯೋಗ ಪಡಿಸಿಕೊಂಡ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು.
ಬಡಜನರಿಗಾಗಿ ನೂರಾರು ಕೆಲಸ
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ವೇದಿಕೆಯ ಒಂದು ಬದಿ ಗಾಂಧೀಜಿ, ಇನ್ನೊಂದು ಬದಿ ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರವಿದೆ. ಗಾಂಧೀಜಿಯವರ ತತ್ವಾದರ್ಶಗಳನ್ನು, ವೀರೇಂದ್ರ ಹೆಗ್ಗಡೆ ಅವರು 600 ಪುಸ್ತಕಗಳಾಗಿ ಪರಿವರ್ತಿಸಿ, ಬಡಜನರಿಗಾಗಿ ನೀಡಿದ್ದಾರೆ. ಇಂತಹ ನೂರಾರು ಕೆಲಸಗಳು ಇಲ್ಲಿ ನಡೆಯುತ್ತಿವೆ ಎಂದರು.
ಸ್ವಾವಲಂಭಿ ಜೀವನಕ್ಕೆ ಪೂರಕ
ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮಾತನಾಡಿ, ಸರ್ಕಾರ ಮಾಡದ ಕೆಲಸಗಳನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಸರಿಯಾದ ಸಮಯಕ್ಕೆ ಸಾಲ ಪಡೆದು, ಕಟ್ಟುವ ಹಾಗೂ ತಮ್ಮ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ಇದು ಪೂರಕವಾಗಿದೆ. ಆದ್ದರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಭಿ ಜೀವನಕ್ಕೆ ಪೂರಕವಾಗಿದೆ ಎಂದರು.
ಶಿಸ್ತುಬದ್ಧ ಕೆಲಸಗಳಿಂದ ಯಶಸ್ಸು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್, 2002ರಲ್ಲಿ ಪುತ್ತೂರಿನಲ್ಲಿ ನಗರಾಭಿವೃದ್ಧಿ ಯೋಜನೆ ಆರಂಭಿಸಿ, ಇಂದು ಪುತ್ತೂರಿನಲ್ಲಿ ಯೋಜನಾ ಕಚೇರಿ ಸ್ಥಾಪಿಸುವಷ್ಟರಮಟ್ಟಿಗೆ ಯೋಜನೆ ಬೆಳೆದು ನಿಂತಿದೆ. ಶಿಸ್ತುಬದ್ಧವಾದ ಯೋಜನೆಗಳಿಂದಾಗಿ ಇಂತಹ ಬೆಳವಣಿಗೆಗಳನ್ನು ಕಾಣಲು ಸಾಧ್ಯ. ಇಂದು ರಾಜ್ಯಾದ್ಯಂತ 6 ಲಕ್ಷ ಸ್ವಸಹಾಯ ಸಂಘಗಳು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಆಗುತ್ತಿವೆ. ಹರಿಯಾಣದಲ್ಲೂ ಒಂದು ಸ್ವಯಂ ಸೇವಾ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಗ್ರಾಮದ ಎಲ್ಲಾ ಸೌಲಭ್ಯಗಳು ಒಂದೇ ಕಿಟಕಿಯಲ್ಲಿ ಸಿಗುವ ಹಾಗೇ 9 ಸಾವಿರ ಸಂಸ್ಥೆ ರಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ಅಕೌಂಟ್ ಬಗ್ಗೆಯೂ ಮಾಹಿತಿ ನೀಡಲಿದ್ದು, ಮುಂದಿನ ವರ್ಷದಿಂದ ಹಣಕಾಸಿನ ವರ್ಗಾವಣೆ ಮೊಬೈಲ್ ಮೂಲಕವೇ ನಡೆಯಲಿದೆ ಎಂದರು. ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಮಹಾಬಲ ರೈ ಅಧ್ಯಕ್ಷತೆ ವಹಿಸಿದ್ದರು. ಕಡಬ ಹಾಗೂ ಪುತ್ತೂರು ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಲ, ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜಾ, ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಶಶಿಕುಮಾರ್ ರೈ ಬಲ್ಯೊಟ್ಟು, ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಸದಾಶಿವ ರೈ ದಂಬೆಕಾನ, ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.