ಪುತ್ತೂರು: ಇಲ್ಲಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೊನೆಗೂ ಸಚಿವರು ಅಧಿವೇಶನದಲ್ಲಿ ಅಸ್ತು ಎಂದಿದ್ದಾರೆ.
ಶಾಸಕ ಸಂಜೀವ ಮಠಂದೂರು ಅವರು ಕೇಳಿರುವ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಉತ್ತರ ನೀಡಿದ್ದರು. ಆದರೆ ಉತ್ತರ ತೃಪ್ತಿಕರವಾಗಿರದೇ ಇದ್ದುದರಿಂದ, ಸದನದಲ್ಲಿ ಮಾತನಾಡಲು ಅವಕಾಶ ಸಿಕ್ಕಾಗ, ಸಭಾಧ್ಯಕ್ಷರ ಗಮನ ಸೆಳೆದು, ಸಮಸ್ಯೆಗೆ ಪರಿಹಾರ ನೀಡುವಲ್ಲಿ ಶಾಸಕ ಸಂಜೀವ ಮಠಂದೂರು ಯಶಸ್ವಿಯಾಗಿದ್ದಾರೆ.
ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಡಕಾಗಿತ್ತು. ಇಲ್ಲಿನ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯನ್ನು ಬೇರೆ ಕಾಲೇಜಿಗೆ ನಿಯೋಜನೆ ಮಾಡಿದ ಹಿನ್ನೆಲೆಯಲ್ಲಿ, ಕಾಲೇಜಿನ ದೈನಂದಿನ ನಿರ್ವಹಣೆಗೆ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು, ಲಿಖಿತವಾಗಿ ಪ್ರಶ್ನಿಸಿದ್ದರು. ಇದಕ್ಕೆ ತೃಪ್ತಿಕರ ಉತ್ತರ ಸಿಗದೇ ಹೋದಾಗ, ಸದನದಲ್ಲಿ ಮತ್ತೊಮ್ಮೆ ಪ್ರಶ್ನಿಸುವ ಮೂಲಕ ಸಮಸ್ಯೆಯ ಬೆನ್ನು ಹಿಡಿದು ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
ಏನು ಸಮಸ್ಯೆ?
ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಹುದ್ದೆ ಖಾಲಿಯಾಗಿದ್ದು, ಉಪನ್ಯಾಸಕರು ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2 ಮಂದಿ ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ನಿಯೋಜನೆ ಮಾಡಲಾಗಿದೆ. ಬೋಧಕೇತರ ಸಿಬ್ಬಂದಿಯಲ್ಲಿ 4ರಲ್ಲಿ 3 ಮಂದಿಯನ್ನು ಬೇರೆಡೆಗೆ ನಿಯೋಜನೆ ಮಾಡಲಾಗಿದೆ. ಅಂದರೆ 10 ಮಂದಿ ಬೋಧಕೇತರ ಸಿಬ್ಬಂದಿಗಳ ಪೈಕಿ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆಡೆಗೆ ನಿಯೋಜನೆಗೊಂಡ ಉಪನ್ಯಾಸಕ, ಸಿಬ್ಬಂದಿಗಳ ಹುದ್ದೆ ಇದೇ ಕಾಲೇಜಿನಲ್ಲಿ ಇರುವುದರಿಂದ, ಈ ಹುದ್ದೆಗೆ ಬೇರೆ ಉಪನ್ಯಾಸಕ, ಸಿಬ್ಬಂದಿಗಳನ್ನು ತೆಗೆದುಕೊಳ್ಳುವಂತಿಲ್ಲ. ಬೇರೆ ಹುದ್ದೆಗಳನ್ನು ಸೃಷ್ಟಿ ಮಾಡುವಂತಿಲ್ಲ. ಆದ್ದರಿಂದ ಹುದ್ದೆಗಳು ಖಾಲಿಯಾಗಿಯೇ ಬಿದ್ದಿದೆ. ಇದರಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಆದ್ದರಿಂದ ನಿಯೋಜನೆಯನ್ನು ಹಿಂದೆಗೆದುಕೊಳ್ಳುವಂತೆ ಶಾಸಕರು ಆಗ್ರಹಿಸಿದ್ದರು.
ಚುರುಕು ಮುಟ್ಟಿಸಿದ ಸಭಾಧ್ಯಕ್ಷರು:
ಸದನದ ಸಭಾಧ್ಯಕ್ಷತೆಯನ್ನು ವಹಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ತಾಂತ್ರಿಕ ಸಮಸ್ಯೆಯನ್ನು ಸಚಿವರಿಗೆ ಮನವರಿಕೆ ಮಾಡಿಸಿದ್ದು ಮಾತ್ರವಲ್ಲ, ತಕ್ಷಣ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಸಚಿವರನ್ನು ಪ್ರಶ್ನಿಸಿದರು. ಉತ್ತರಿಸಿದ ಸಚಿವ ಅಶ್ವತ್ಥ ನಾರಾಯಣ, ಉಪನ್ಯಾಸಕರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿ, ಚರ್ಚೆಗೆ ತೆರೆ ಎಳೆದರು.