ಪುತ್ತೂರು: ಡಾಕ್ಟರ್, ಇಂಜಿನಿಯರ್ ಜೊತೆಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಸಮರ್ಥ ಅಧಿಕಾರಿಗಳ ಅವಶ್ಯಕತೆಯು ಈ ದೇಶಕ್ಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತಲೂ ಗಮನ ಹರಿಸಬೇಕು ಎಂದು ಪುತ್ತೂರು ಹಾಗೂ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೇಳಿದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಅಡಿಟೋರಿಯಂನಲ್ಲಿ ದ. 22 ರಂದು ನಡೆದ ಸನ್ಮಾನ ರಶ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ವರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಐಎಎಸ್, ಐಪಿಎಸ್ ಮುಂತಾದ ಪರೀಕ್ಷೆಗಳಲ್ಲಿ ಭಾಗಿಗಳಾಗಿ ಉನ್ನತವಾದ ಶಿಕ್ಷಣವನ್ನು ಪಡೆಯಬೇಕು ಎಂದ ಅವರು, ಓದುವ ಹವ್ಯಾಸದಿಂದ ನಮ್ಮ ಜ್ಞಾನ ವೃದ್ಧಿ ಆಗುತ್ತದೆ. ಓದುವ ಪರಿಪಾಠದಿಂದ ನೆನಪು ಶಕ್ತಿ ಜಾಸ್ತಿಯಾಗುತ್ತದೆ ಎಂದು ಹೇಳಿದರು.
ಸಹಕಾರ ರತ್ನ ಸವಣೂರು ಸೀತಾರಾಮ ರೈ ಅವರು ಸವಣೂರಿನಂಥ ಗ್ರಾಮೀಣ ಭಾಗದಲ್ಲಿ ಎಲ್ಲಾ ಸೌಲಭ್ಯ ಹೊಂದಿರುವ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ದ.ಕ. ಜಿಲ್ಲೆಗೆ ಮಾದರಿ ಆಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಜೀವನ ಶ್ರೇಷ್ಠ: ಧ್ರುವ ಮುಂಡೋಡಿ
ವಿದ್ಯಾರಶ್ಮಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧ್ರುವ ಮುಂಡೋಡಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಶ್ರೇಷ್ಠ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು, ಉನ್ನತವಾದ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಇದೇ ಸಂದರ್ಭ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಟ್ರಸ್ಟಿ ಸವಣೂರು ಸುಂದರ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ವಿದ್ಯಾರ್ಥಿ ನಾಯಕ ಪ್ರಣವ್ ಉಪಸ್ಥಿತರಿದ್ದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಸ್ವಾಗತಿಸಿ, ವಿದ್ಯಾರ್ಥಿನಿ ಶಿಫಾಲಿ ವಂದಿಸಿದರು. ಆಯಿಷತ್ ಕಾರ್ಯಕ್ರಮ ನಿರೂಪಿಸಿದರು.