ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕು ಎನ್ನುವುದು ಜಿಲ್ಲಾ ಕೇಂದ್ರಕ್ಕೆ ಪೂರಕವಾದ ಬೇಡಿಕೆ. ಆದ್ದರಿಂದ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾಲೇಜು ನಿರ್ಮಾಣದ ಅನಿವಾರ್ಯತೆಯ ಬಗ್ಗೆ ನೆನಪಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರ ಈಗಾಗಲೇ ಪುತ್ತೂರಿನಲ್ಲಿ 40 ಎಕರೆ ಜಾಗ ಮೀಸಲಿಟ್ಟಿದೆ. ಈ ಜಾಗಕ್ಕೆ ಬೇಲಿ ನಿರ್ಮಿಸಿ, ನಾಮಫಲಕ ಅಳವಡಿಸಬೇಕು. ಅನ್ಯ ಕಾರ್ಯಕ್ಕೆ ಈ ಜಾಗವನ್ನು ಬಳಸಿಕೊಳ್ಳಬಾರದು. ಇದಕ್ಕೆ ಪೂರಕವಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಯನ್ನು 300 ಬೆಡ್‌ಗೆ ಮೇಲ್ದರ್ಜೆಗೇರಿಸಿ, ವೈದ್ಯರ ನೇಮಕಾರಿ ಸೇರಿದಂತೆ ಪೂರ್ಣ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಅಧಿವೇಶನದಲ್ಲಿ ಶಾಸಕರು ಪ್ರಸ್ತಾಪಿಸುವಂತೆ ನಮ್ಮ ನಿಯೋಗವು ಬೆಳಗಾವಿಗೆ ಹೋಗಿ ವಿಧಾನಸಭೆ ಮತ್ತು ಪರಿಷತ್‌ನ ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಸಹಿ ಸಂಗ್ರಹ ಅಭಿಯಾನ:
ಸಮಿತಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಮಾತನಾಡಿ, ಇದೊಂದು ಪಕ್ಷಾತೀತ ಹೋರಾಟ. ಈಗಾಗಲೇ ರಾಜ್ಯ ಸರ್ಕಾರವು ಜಿಲ್ಲೆಯ ಕೆಲವು ಕಡೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಇದು ಸಂವಿಧಾನ ವಿರೋಧಿಯಾದ ನಡೆಯಾಗಿದೆ. ಇದರಿಂದ ಸರ್ಕಾರಿ ಕಾಲೇಜ್‌ನ ಹಿಡಿತವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದಂತಾಗುತ್ತದೆ. ಅಲ್ಲದೆ ಬಡವರಿಗೆ ಇನ್ನಷ್ಟು ಅನಾನುಕೂಲವಾಗಲಿದೆ. ಪುತ್ತೂರಿನಲ್ಲಿ ಪೂರ್ಣ ಪ್ರಮಾಣದ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಅವರ ಬೆಂಬಲಕ್ಕಾಗಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು ಎಂದರು.
ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಝೇವಿಯರ್ ಡಿಸೋಜ, ರೂಪೇಶ್ ರೈ ಅಲಿಮಾರ್, ಡಾ. ವಿಶುಕುಮಾರ್ ಉಪಸ್ಥಿತರಿದ್ದರು.