ವಿಮಾನ ನಿಲ್ದಾಣ: ಭದ್ರತಾ ತಪಾಸಣೆಗೆ 3ಡಿ ಸ್ಕ್ಯಾನರ್ – ಬಿಸಿಎಎಸ್‌ ಶಿಫಾರಸು

ನವದೆಹಲಿ: ಪ್ರಯಾಣಿಕರು ವಿಮಾನ ನಿಲ್ದಾಣಗಳ ಸ್ಕ್ಯಾನರ್‌ಗಳಲ್ಲಿ (ಶೋಧಕ) ಭದ್ರತಾ ತಪಾಸಣೆಗೆ ಒಳಗಾಗುವ ಮುನ್ನ, ತಮ್ಮ ಚೀಲದಲ್ಲಿರುವ ಮೊಬೈಲ್‌, ಚಾರ್ಜರ್‌ನಂತಹ ವಿದ್ಯುನ್ಮಾನ ಉಪಕರಣಗಳನ್ನು ತೆಗೆದಿರಿಸುವ ಪ್ರಮೇಯ ಇನ್ನು ಮುಂದೆ ಇರುವುದಿಲ್ಲ. ನಿಲ್ದಾಣಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆಗೆ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಆಧರಿತ 3ಡಿ ಸ್ಕ್ಯಾನರ್‌ಗಳನ್ನು ಅಳವಡಿಸುವಂತೆ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್) ಶಿಫಾರಸು ಮಾಡಿದೆ.

ಕೈಚೀಲದಲ್ಲಿರುವ (ಹ್ಯಾಂಡ್ ಬ್ಯಾಗೇಜ್) ವಸ್ತುಗಳನ್ನು ಎರಡು ಆಯಾಮಗಳಲ್ಲಿ ಮಾತ್ರ ನೋಡಬಹುದಾದ ಸ್ಕ್ಯಾನರ್‌ಗಳನ್ನು ವಿಮಾನ ನಿಲ್ದಾಣಗಳಲ್ಲಿ ಈಗ ಬಳಸಲಾಗುತ್ತಿದೆ. ಆದರೆ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಆಧರಿತ ಸ್ಕ್ಯಾನರ್‌ಗಳು ಕೈಚೀಲಗಳ ಮೂರು ಆಯಾಮಗಳ (3ಡಿ) ಚಿತ್ರಣವನ್ನು ಒದಗಿಸಲಿವೆ ಎಂದು ಸಂಸ್ಥೆಯ ಜಂಟಿ ಮಹಾನಿರ್ದೇಶಕ ಜೈದೀಪ್‌ ಪ್ರಸಾದ್ ಬುಧವಾರ ಹೇಳಿದ್ದಾರೆ.

ಈ ಸ್ಕ್ಯಾನರ್‌ಗಳನ್ನು ಅಳವಡಿಸುವುದರಿಂದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣಾ ಪ್ರಕ್ರಿಯೆಯೂ ವೇಗವಾಗಿ ಮುಗಿಯುತ್ತದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳ ಹಾಗೂ ಭದ್ರತಾ ತಪಾಸಣೆಗೆ ಸರದಿಯಲ್ಲಿ ಹೆಚ್ಚು ಸಮಯ ಕಾಯುವ ಸ್ಥಿತಿ ಎದುರಾಗಿದೆ ಎಂಬ ಬಗ್ಗೆ ಕಳೆದ ಕೆಲವು ವಾರಗಳಿಂದ ದೂರುಗಳು ಬರುತ್ತಿವೆ. ದಟ್ಟಣೆ ಹಾಗೂ ಪ್ರಯಾಣಿಕರ ಸರತಿ ಸಾಲು ತಗ್ಗಿಸಲು ಭದ್ರತಾ ಅಧಿಕಾರಿಗಳು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರು. 





































 
 

ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಭದ್ರತೆಯ ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್‌ಪ್ಲೋಸಿವ್ ಡಿಟೆಕ್ಟಿವ್ ಸೈಸ್ಟಮ್ಸ್ (ಸಿಟಿ–ಇಡಿಎಸ್) ಮಷಿನ್ ಮತ್ತು ಡುಯಲ್ ಜನರೇಟರ್ ಎಕ್ಸ್–ಬಿಐಎಸ್‌ ಮಷಿನ್‌ಗಳ ಅಳವಡಿಕೆ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top