ಹೆಣ್ಣುಮಕ್ಕಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ತಾಲಿಬಾನ್‌ ತಡೆ

ಅಫ್ಘಾನಿಸ್ಥಾನದಲ್ಲಿ ಹೆಣ್ಣು ಮಕ್ಕಳು ವಿವಿ ಮೆಟ್ಟಿಲು ಹತ್ತದಂತೆ ಆದೇಶ

ಕಾಬೂಲ್ : ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಮಹಿಳೆಯರ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸಿದೆ. ಈದೀಗ ತಾಲಿಬಾನ್ ಸರ್ಕಾರ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸುವಂತೆ ಆದೇಶಿಸಿದೆ. ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಸರಳ ಹಾಗೂ ಜನಸ್ನೇಹಿ ಆಡಳಿತದ ಭರವಸೆ ನೀಡಿದ್ದರೂ, ತಾಲಿಬಾನ್ ಅಂತರರಾಷ್ಟ್ರೀಯ ಆಕ್ರೋಶವನ್ನು ನಿರ್ಲಕ್ಷಿಸಿ ಮಹಿಳೆಯರ ಜೀವನದ ಎಲ್ಲಾ ಅಂಶಗಳ ಮೇಲೆ ನಿರ್ಬಂಧಗಳನ್ನು ಹೆಚ್ಚಿಸುತ್ತಿದೆ.
ಮಹಿಳಾ ಶಿಕ್ಷಣವನ್ನು ಅಮಾನತುಗೊಳಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲು ತಿಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ನೇಡಾ ಮೊಹಮ್ಮದ್ ನದೀಮ್ ಸಹಿ ಮಾಡಿರುವ ಪತ್ರವನ್ನು ಎಲ್ಲ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ. ಈ ಪತ್ರವನ್ನು ಟ್ವೀಟ್ ಮಾಡಿರುವ ಸಚಿವಾಲಯದ ವಕ್ತಾರ ಜಿಯಾವುಲ್ಲಾ ಹಾಶಿಮಿ, ಎಎಫ್‌ಪಿಗೆ ಈ ಸಂದೇಶದ ಮೂಲಕ ಆದೇಶವನ್ನು ಖಚಿತಪಡಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸಾವಿರಾರು ವಿದ್ಯಾರ್ಥಿನಿಯರು ದೇಶಾದ್ಯಂತ ನಡೆದ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಿದ್ದರು. ಈ ಪೈಕಿ ಹಲವರು ಬೋಧನೆ ಮತ್ತು ವೈದ್ಯಕೀಯ ಶಿಕ್ಷಣದ ಆಯ್ಕೆಯ ನಿರೀಕ್ಷೆಯಲ್ಲಿದ್ದರು. ಈ ವಿವಿ ಎಂಟ್ರೆನ್ಸ್ ಎಕ್ಸಾಂ ನಡೆದು ಮೂರೇ ತಿಂಗಳಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲಿಬಾನ್ ಸರ್ಕಾರ ತಡೆ ಹಾಕಿದೆ.
ತಾಲಿಬಾನ್‌ಗಳು ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ, ವಿಶ್ವವಿದ್ಯಾನಿಲಯಗಳಲ್ಲಿ ಲಿಂಗ ಪ್ರತ್ಯೇಕಿತ ತರಗತಿಗಳು ಮತ್ತು ಪ್ರವೇಶ ದ್ವಾರಗಳು ಸೇರಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು, ಆದರೆ ಮಹಿಳೆಯರಿಗೆ ಮಹಿಳಾ ಪ್ರಾಧ್ಯಾಪಕರು ಅಥವಾ ವೃದ್ಧರು ಮಾತ್ರ ಕಲಿಸಲು ಅನುಮತಿ ನೀಡಲಾಯಿತು. ದೇಶಾದ್ಯಂತ ಹೆಚ್ಚಿನ ಹದಿಹರೆಯದ ಹುಡುಗಿಯರನ್ನು ಮಾಧ್ಯಮಿಕ ಶಾಲಾ ಶಿಕ್ಷಣದಿಂದ ಈಗಾಗಲೇ ನಿಷೇಧಿಸಲಾಗಿದೆ, ವಿಶ್ವವಿದ್ಯಾನಿಲಯದ ಸೇರ್ಪಡೆಯನ್ನು ಈಗ ಸೀಮಿತಗೊಳಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top