ಭಜನೆ, ಭಜಕರ ನಿಂದಿಸಿದ ಡಿ.ಆರ್.ಎಫ್.ಓ.: ಎಸಿಎಫ್ ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕೆ | ಠಾಣೆಯಲ್ಲಿ ದೂರು ದಾಖಲಿಸಿದ ಕಾರ್ಯಕರ್ತರು

ಪುತ್ತೂರು: ಭಜನೆಯನ್ನು ಹಾಗೂ ಭಜಕರನ್ನು ಅವಮಾನಿಸಿ ಹೇಳಿಕೆ ನೀಡಿದ್ದ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ಬಳಿಕ ಹಿಂದೂ ಪರ ಸಂಘಟನೆಗಳು ಪ್ರತಿಭಟನೆಯನ್ನು ಹಿಂದೆಗೆದುಕೊಂಡವು.

ಕೊಯಿಲ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರು ಭಜನೆಯ ಬಗ್ಗೆ ಅವಹೇಳನ ಮಾಡಿದ್ದಲ್ಲದೇ, ಭಜನೆಯಲ್ಲಿ ನಿರತರಾದವರನ್ನು ನಿಂದಿಸಿ ಫೇಸ್ ಬುಕ್ ನಲ್ಲಿ ಸಂದೇಶ ಬರೆದಿದ್ದರು. ಇದರಿಂದ ಆಕ್ರೋಶಗೊಂಡ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಬುಧವಾರ ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಕ್ಷಣವೇ ಆಗಮಿಸಿ, ಸಂಜೀವ ಪೂಜಾರಿ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದರು. ಇದೇ ಸಂದರ್ಭ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ, ಭಜನೆ ಹಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಬೆಳಗ್ಗೆ ಆರಂಭವಾದ ಪ್ರತಿಭಟನೆ ಬರಬರುತ್ತಾ ತೀವ್ರಗತಿಯಲ್ಲಿ ಸಾಗಿತು. ಆರ್.ಎಫ್.ಓ. ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರನ್ನು ಸಮಾಧಾನಿಸಿದರೂ, ಫಲಕೊಡಲಿಲ್ಲ. ಸೂಕ್ತ ಕ್ರಮ ಕೈಗೊಳ್ಳುವ ತನಕ ಪ್ರತಿಭಟನೆ ಹಿಂದೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಸಂಘಟನೆ ಕಾರ್ಯಕರ್ತರು ಮಧ್ಯಾಹ್ನದ ಊಟಕ್ಕೂ ಸ್ಥಳದಲ್ಲೇ ವ್ಯವಸ್ಥೆ ಮಾಡಿದರು. ಕ್ರಮ ಕೈಗೊಳ್ಳದ ಹೊರತು, ರಾತ್ರಿಯಾದರೂ ಸ್ಥಳದಿಂದ ಕದಲುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿದರು. ಪೊಲೀಸರು ಹೆಚ್ಚಿನ ಬಂದೋಬಸ್ತಿಗೆ ವ್ಯವಸ್ಥೆ ಮಾಡಿದರು.































 
 

ಮಧ್ಯಾಹ್ನದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾನಿರತರನ್ನು ಮಾತನಾಡಿಸಿದರು. ಈ ಸಂದರ್ಭ ತಮ್ಮ ಆಕ್ರೋಶ ಹೊರಹಾಕಿದ ಸಂಘಟನೆ ಕಾರ್ಯಕರ್ತರು, ಸಂಜೀವ ಪೂಜಾರಿ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಎಸಿಎಫ್, ಮೊದಲಿಗೆ ಸಂಜೀವ ಪೂಜಾರಿ ಅವರಲ್ಲಿ ಕಾರಣ ಕೇಳಿ ನೊಟೀಸ್ ಜಾರಿ ಮಾಡಲಾಗುವುದು. ಅವರು ಉತ್ತರ ನೀಡಿದ ಬಳಿಕ ಅಮಾನತಿನ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನಾನಿರತರ ಆಗ್ರಹದಂತೆ, ಸಂಜೀವ ಪೂಜಾರಿ ಅವರನ್ನು ತಕ್ಷಣದಿಂದಲೇ ರಜೆಯಲ್ಲಿ ಕಳುಹಿಸಲಾಗುವುದು ಎಂದು ತಿಳಿಸಿದರು. ಎಸಿಎಫ್ ಅವರ ಹೇಳಿಕೆಯಿಂದಾಗಿ ಪ್ರತಿಭಟನಾನಿರತರು ಪ್ರತಿಭಟನೆಯನ್ನು ಹಿಂದೆಗೆದುಕೊಂಡರು.

ಠಾಣೆಯಲ್ಲಿ ದೂರು ದಾಖಲು

ಧಾರ್ಮಿಕ ಆಚರಣೆಯ ಬಗ್ಗೆ ಅವಹೇಳನಕಾರಿ ಮಾಡಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಸರಕಾರಿ ಅಧಿಕಾರಿ ಸಂಜೀವ ಪೂಜಾರಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನಾ ಸ್ಥಳದಿಂದ ನೇರವಾಗಿ ಠಾಣೆಗೆ ತೆರಳಿದ ಪ್ರತಿಭಟನಾನಿರತರು, ದೂರು ನೀಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top