ಲೆಜೆಂಡ್‌ಗಳು ಸಾಯಬಹುದು, ಆದರೆ ಪರಂಪರೆ ಸಾಯುವುದಿಲ್ಲ

ಎಲ್ಲರೂ ಗೆಲುವಿನ ಸಂಭ್ರದಲ್ಲಿರುವಾಗ ಆತ ಸೋತವನನ್ನು ಸಾಂತ್ವನಿಸುತ್ತಿದ್ದ!

A LEGEND may die, but the LEGACY continues!
ಈ ರವಿವಾರದ ರಾತ್ರಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯವು ಹಲವು ಸ್ಮರಣೀಯವಾದ ಕ್ಷಣಗಳನ್ನು ಬಿಟ್ಟುಹೋಯಿತು. ಅರ್ಜೆಂಟೀನಾ ತನ್ನ ಫುಟ್ಬಾಲ್ ಲೆಜೆಂಡ್ ಆದ ಮೆಸ್ಸಿಗೆ ಗೆಲುವಿನ ವಿದಾಯವನ್ನು ಕೋರಿತು. ಫ್ರಾನ್ಸ್ ಕೊನೆಯ ಕ್ಷಣದವರೆಗೂ ಫೈಟ್ ಕೊಟ್ಟು ಪೆನಾಲ್ಟಿ ಶೂಟೌಟನಲ್ಲಿ ಶರಣಾಯಿತು.
ಅರ್ಜೆಂಟೀನಾ ಕಪ್ತಾನ ಮೆಸ್ಸಿ ಹೊಳೆಯುವ ಫಿಫಾ ಚಿನ್ನದ ಟ್ರೋಫಿಯನ್ನು ಎತ್ತಿಕೊಳ್ಳುವ ಕ್ಷಣಕ್ಕಾಗಿ ಇಡೀ ಜಗತ್ತು ಕಾದು ಕುಳಿತಿತ್ತು. ಕತಾರ್ ನಗರದ ಪ್ರಮುಖ ಗ್ರೌಂಡನಲ್ಲಿ ಮೆಸ್ಸಿ… ಮೆಸ್ಸಿ… ಎಂಬ ಘೋಷವು ಮುಗಿಲು ಮುಟ್ಟಿತ್ತು. ಆದರೆ ಮೆಸ್ಸಿ ಎಲ್ಲಿ ಎಂದು ಅವರ ತಂಡವು ಆಗಲೇ ಹುಡುಕಲು ತೊಡಗಿತ್ತು! ಮೆಸ್ಸಿ ಹೋದದ್ದಾದರೂ ಎಲ್ಲಿಗೆ?

ಮೆಸ್ಸಿ ಎಂಬಪ್ಪೆಯ ಭುಜ ಹಿಡಿದು ಸಾಂತ್ವನ ಹೇಳುತ್ತಿದ್ದ!































 
 

ಮೆಸ್ಸಿ ತನ್ನ ತಂಡದ ಸಂಭ್ರಮವನ್ನು ಬಿಟ್ಟು ತನ್ನ ಎದುರಾಳಿ ತಂಡದ ಸ್ಟಾರ್ ಆಟಗಾರ ಎಂಬಪ್ಪೆಯ ಬಳಿಗೆ ಹೋಗಿ ಆತನ ಭುಜ ಹಿಡಿದು ಸಾಂತ್ವನವನ್ನು ಹೇಳುತ್ತಿದ್ದ! ಅವನ ಕಣ್ಣೀರು ಒರೆಸುತ್ತಿದ್ದ. ಎಂಬಪ್ಪೆ ಫ್ರಾನ್ಸ್ ತಂಡದ ನವೋದಿತ ಸ್ಟಾರ್ ಆಟಗಾರ. ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲ್ ಹೊಡೆದ ಆಟಗಾರ. ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ಹೊಡೆದರೂ ಟ್ರೋಫಿ ಗೆಲ್ಲಲು ಆಗಲಿಲ್ಲ ಅನ್ನುವುದು ಅವನ ದುಃಖಕ್ಕೆ ಕಾರಣ. ಆತನ ವಯಸ್ಸು 23. ಮೆಸ್ಸಿ ವಯಸ್ಸು 35! ಇನ್ನು ಮೆಸ್ಸಿ ಫುಟ್ಬಾಲ್ ಆಡುವುದಿಲ್ಲ ಎಂದು ಆಗಲೇ ಘೋಷಣೆ ಮಾಡಿದ್ದ. ಫುಟ್ಬಾಲ್‌ನಲ್ಲಿ ಏನೆಲ್ಲ ಪ್ರಶಸ್ತಿಗಳಿವೆ ಎಲ್ಲವನ್ನೂ ಆತ ಪಡೆದುಕೊಂಡು ಆಗಿತ್ತು. ಫುಟ್ಬಾಲ್ ಮೈದಾನದಲ್ಲಿ ಇನ್ನೇನೂ ಮಾಡಲು ಬಾಕಿ ಇಲ್ಲ ಎಂದಾತನ ಆತ್ಮಕ್ಕೆ ಗೊತ್ತಾದಾಗ ಆತ ತನ್ನ ಉತ್ತರಾಧಿಕಾರಿಯನ್ನು ಹೆಸರಿಸಲೇ ಬೇಕಿತ್ತು.
ಅದಕ್ಕಾಗಿ ಆತ ಎಂಬಪ್ಪೆಯ ಬೆನ್ನು ತಟ್ಟುತ್ತಾ ತುಂಬಾ ಹೊತ್ತು ನಿಂತಿದ್ದ! ಆ ಎಂಬಪ್ಪೆಯ ವಿಶ್ವಕಪ್ ಆಟವೇ ಹಾಗೆ ಇತ್ತು!

ದಶಕಗಳ ಹಿಂದೆ ಮರಡೋನಾ ಅದನ್ನೇ ಮಾಡಿದ್ದ

2006ರಲ್ಲಿ ಅದೇ ಕೆಲಸವನ್ನು ಅದೇ ಅರ್ಜೆಂಟಿನಾದ ಲೆಜೆಂಡ್ ಆಟಗಾರ ಮರಡೋನಾ ಮಾಡಿದ್ದ. ಮೆಸ್ಸಿ ತನ್ನ ಉತ್ತರಾಧಿಕಾರಿ ಎಂದು ಮರಡೋನಾ ಘೋಷಣೆ ಮಾಡಿದ್ದ! ಇಂದು ಅದೇ ಕೆಲಸವನ್ನು ಮೆಸ್ಸಿ ಮಾಡಿದ್ದ ಎಂಬಪ್ಪೆಯ ಭುಜ ಹಿಡಿದು! ಲೆಜೆಂಡಗಳು ಇರುವುದೇ ಹಾಗೆ, ಅವರು ತಮ್ಮ ಪರಂಪರೆಯನ್ನು (Legacy) ಸಾಯಲು ಬಿಡುವುದಿಲ್ಲ.
ಇದೊಂದು ರಿಲೆ ಓಟದ ಹಾಗೆ. ಒಬ್ಬ ಓಟಗಾರ ತನ್ನ ಬ್ಯಾಟನ್ ಇನ್ನೊಬ್ಬರಿಗೆ ಹಸ್ತಾಂತರ ಮಾಡುತ್ತ ಅವನ ಜೊತೆ ಇನ್ನೂ ಸ್ವಲ್ಪ ದೂರ ಓಡಿ ಹುರಿದುಂಬಿಸುತ್ತಾನೆ. ಮೊನ್ನೆ ಕತಾರನಲ್ಲಿ ಆದದ್ದೂ ಅದೇನೇ. ಎಂಬಪ್ಪೆ ಮೆಸ್ಸಿಯ ಪರಂಪರೆಯನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಾನೆ ಅನ್ನುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ.

ಡಾನ್ ಬ್ರಾಡ್ಮನ್ ಕ್ರಿಕೆಟಿನಲ್ಲಿ ಅದನ್ನೇ ಮಾಡಿದ್ದ

ಕ್ರಿಕೆಟಿನ ದಂತಕತೆ ಡೊನಾಲ್ಡ್ ಬ್ರಾಡ್ಮನ್ ತನ್ನ 90ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅದನ್ನೇ ಮಾಡಿದ್ದ. ಆ ಸಂಭ್ರಮಕ್ಕೆ ಆತ ಆಮಂತ್ರಿಸಿದ್ದು ಸಚಿನ್ ತೆಂಡುಲ್ಕರನನ್ನು! ಈ ಹುಡುಗ ತನ್ನ ಹಾಗೆಯೇ ಆಡುತ್ತಾನೆ ಕಣೆ ಎಂದು ತನ್ನ ಹೆಂಡತಿಗೆ ಹೇಳಿದ್ದ ಡಾನ್. ತಾನು ಆಡಿದ ಬ್ಯಾಟನ್ನು ಸಹಿ ಮಾಡಿ ಸಚಿನ್‌ಗೆ ಕೊಟ್ಟು ಆತನ ಬೆನ್ನು ತಟ್ಟಿ ಕಳುಹಿಸಿದ್ದ. ಸಚಿನ್ ಅದೇ ಲೆಗೆಸಿಯನ್ನು ಮುಂದೆ ಸಮರ್ಥವಾಗಿ ಲೀಡ್ ಮಾಡಿದ. ಕ್ರಿಕೆಟಿನ ಎಲ್ಲಾ ದಾಖಲೆಗಳನ್ನು ಮುರಿದು ಭಾರತರತ್ನ ಪಡೆದು ಹೊರಬಂದ. ಹೊರಬರುವ ಮೊದಲು ಅವನು ಕೂಡ ಅದೇ ಕೆಲಸವನ್ನು ಪೂರ್ತಿ ಮಾಡಿದ್ದ.

2011ರ ವಿಶ್ವಕಪ್ ಫೈನಲ್ ಪಂದ್ಯ!

ಭಾರತ ಶ್ರೀಲಂಕಾವನ್ನು ಸೋಲಿಸಿ ಏಕದಿನದ ವಿಶ್ವಕಪ್ ಗೆದ್ದಿತ್ತು. ಧೋನಿ ಹುಡುಗರು ಸಚಿನ್ ತೆಂಡೂಲ್ಕರನನ್ನು ಹೆಗಲ ಮೇಲೆ ಕೂರಿಸಿ ಇಡೀ ಗ್ರೌಂಡಿಗೆ ಪ್ರದಕ್ಷಿಣೆ ಬಂದು ಸೆಲೆಬ್ರೇಟ್ ಮಾಡಿದ್ದರು. ಆಗ ಸಚಿನ್ ವಿರಾಟ್ ಕೊಹ್ಲಿಯ ಭುಜದ ಮೇಲೆ ಕೂತಿದ್ದ. ಸ್ವಲ್ಪ ದಿನಗಳಲ್ಲಿ ಸಚಿನ್ ತನ್ನ ಎಲ್ಲ ಕ್ರಿಕೆಟ್ ದಾಖಲೆಗಳನ್ನು ಮುಂದೆ ವಿರಾಟ್ ಕೋಹ್ಲಿ ಮುರಿಯುತ್ತಾನೆ ಎಂದು ಭವಿಷ್ಯ ನುಡಿದಿದ್ದ. ವಿರಾಟ್ ಈಗ ಅದೇ ದಾರಿಯಲ್ಲಿ ಮುನ್ನಡೆಯುತ್ತಿದ್ದಾನೆ ಅಲ್ಲವೇ?

ಲೆಗೆಸಿ ಕಂಟಿನ್ಯೂಸ್…!

1) ಲತಾ ಮಂಗೇಷ್ಕರ್ ಅವರು ತನ್ನ ಹಾಡನ್ನು ನಿಲ್ಲಿಸುವ ಹೊತ್ತು ತನ್ನ ಪರಂಪರೆಯನ್ನು ಶ್ರೇಯಾ ಘೋಷಾಲ್ ಮುಂದುವರೆಸುತ್ತಾರೆ ಎಂದು ಹೇಳಿದ್ದರು. ಅದೀಗ ಮುಂದುವರೆಯುತ್ತಿದೆ.
2) ಎಸ್. ಜಾನಕಿ ತನ್ನ ಹಾಡು ಮುಗಿಸುವಾಗ ತನ್ನ ಪರಂಪರೆಯನ್ನು ಕೆ. ಎಸ್. ಚೈತ್ರಾ ಹೆಗಲ ಮೇಲೆ ಇಟ್ಟು ನಿವೃತ್ತರಾದರು. ಚೈತ್ರಾ ಈಗಾಗಲೇ ಹಿನ್ನೆಲೆ ಸಂಗೀತಕ್ಕೆ ಆರು ರಾಷ್ಟ್ರ ಪ್ರಶಸ್ತಿ ಪಡೆದು ಮುಂದುವರಿಯುತ್ತಿದ್ದಾರೆ.
3) ಗದಗದ ಮಹಾ ಸಂಗೀತಗಾರರಾದ ಪುಟ್ಟರಾಜ ಗವಾಯಿಗಳು ತಮ್ಮ ಸಂಗೀತ ಯಾತ್ರೆ ಮುಗಿಸುವ ಮೊದಲು ತನ್ನ ಸಂಗೀತ ಪರಂಪರೆಯನ್ನು ಭೀಮಸೇನ್ ಜೋಷಿ ಅವರ ಬಲಿಷ್ಠ ಭುಜಗಳ ಮೇಲಿರಿಸಿ ಮೌನವಾದರು. ಜೋಷಿಜಿ ಅವರು ಅದನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದರು.
ತಾಳ್ಮೆಯಿಂದ ಹುಡುಕಿದರೆ ಇಂತಹ ಸಾವಿರಾರು ಉದಾಹರಣೆಗಳು ನಮಗೆ ದೊರೆಯುತ್ತವೆ.

ಕರುಳು ಹಿಂಡುವ ಎರಡು ಸಿನೆಮಾಗಳು!
1) ಕೆ. ವಿಶ್ವನಾಥ್ ನಿರ್ದೇಶನ ಮಾಡಿದ ದೃಶ್ಯಕಾವ್ಯ ಸಿನೆಮಾ ಶಂಕರಾಭರಣಂ. ಅದರಲ್ಲಿ ಒಬ್ಬ ದೊಡ್ಡ ಸಂಗೀತಗಾರ ಗುರುವಿನ ಪಾತ್ರವಿದೆ. ಆತ ತನ್ನ ಮಗಳು ಸಂಗೀತದ ಗಂಧವಿಲ್ಲದ ಹುಡುಗನನ್ನು ಪ್ರೀತಿಸಿ ಮದುವೆ ಆದಳು ಎಂಬ ಕಾರಣಕ್ಕೆ ಮಗಳು, ಅಳಿಯ ಇಬ್ಬರನ್ನೂ ದೂರ ಮಾಡುತ್ತಾನೆ. ಮುಂದೆ ಆ ಸಿನೆಮಾದ ಕೊನೆಯ ದೃಶ್ಯದಲ್ಲಿ ಆ ಸಂಗೀತ ಗುರು ವೇದಿಕೆಯಲ್ಲಿ ಕಛೇರಿ ಮಾಡುತ್ತ ಉಸಿರು ನಿಲ್ಲಿಸಿದಾಗ ಆತನ ಮೊಮ್ಮಗನು ವೇದಿಕೆಗೆ ಬಂದು ಅದೇ ಹಾಡನ್ನು ಮುಂದುವರೆಸುತ್ತಾನೆ.
2) ಕನ್ನಡದ ಸನಾದಿ ಅಪ್ಪಣ್ಣ ಸಿನೆಮಾದಲ್ಲಿ ರಾಜಕುಮಾರ್ ಒಬ್ಬ ಶಹನಾಯಿ ಕಲಾವಿದ. ಆತನಿಗೆ ಆದ ಅಪಮಾನಗಳನ್ನು ನೋಡುತ್ತ ಮಗ ಸಂಗೀತವನ್ನು ದ್ವೇಷ ಮಾಡುತ್ತಾನೆ. ತಂದೆಯನ್ನು ಕೂಡ ಬಿಟ್ಟು ಹೋಗುತ್ತಾನೆ. ಆತ ಎಷ್ಟೇ ಸಂಗೀತವನ್ನು ದ್ವೇಷ ಮಾಡಿದರೂ ಆತನ ಸಣ್ಣ ಮಗನು (ಅಂದರೆ ರಾಜಕುಮಾರ್ ಮೊಮ್ಮಗ) ಅಜ್ಜನ ಸಂಗೀತದ ಪರಂಪರೆಯನ್ನು ಅಷ್ಟೇ ಸಮರ್ಥವಾಗಿ ಲೀಡ್ ಮಾಡುತ್ತಾನೆ.

ಭರತ ವಾಕ್ಯ

ಒಬ್ಬ ಲೆಜೆಂಡ್ ಸಾಯಬಹುದು. ಆದರೆ ಆತನ ಸಾಧನೆಯ ಪರಂಪರೆ ಸಾಯುವುದಿಲ್ಲ. ಅದು ಅವನ ಜೀನ್ ಮೂಲಕ, ಪರಂಪರೆಯ ಮೆಟ್ಟಿಲುಗಳ ಮೂಲಕ ಆತನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಶಿಷ್ಯರಿಗೆ ಹರಿದು ಬರುವುದು ಖಂಡಿತ.
ಅದು ಲೆಜೆಂಡ್ ಸಾಧಕನ ಪ್ರಬಲ ಇಚ್ಛಾಶಕ್ತಿಯ ಪ್ರತೀಕವೇ ಆಗಿರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top