ಪುತ್ತೂರು: ಶುದ್ಧ ಕುಡಿಯುವ ನೀರಿನ ಯೋಜನೆ ಜಲಸಿರಿ ಕಾಮಗಾರಿಯಿಂದ ಸಾಕಷ್ಟು ಸಮಸ್ಯೆಗಳಾಗಿದ್ದು, ಸಮಸ್ಯೆ ಪರಿಹಾರಕ್ಕೆ ಮುಂದಿನ 15 ದಿನದೊಳಗೆ ಜಲಸಿರಿ ಹಾಗೂ ನಗರಸಭೆ ಕೌನ್ಸಿರ‍್ಸ್ ಸಭೆ ಕರೆಯುವ ಬಗ್ಗೆ ತೀರ್ಮಾನಿಸಲಾಗಿದೆ.
ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆ ನಡೆಯಿತು.
ನಗರಸಭೆ ಸದಸ್ಯ ಶಕ್ತಿ ಸಿನ್ಹಾ ಮಾತನಾಡಿ, ನಗರಾದ್ಯಂತ ಜಲಸಿರಿ ಕಾಮಗಾರಿ ನಡೆಯುತ್ತಿದೆ. ಆದರೆ ತುಕ್ಕು ಹಿಡಿದ ಪೈಪ್, ರಸ್ತೆಗಳನ್ನು ಮತ್ತೆ ಮತ್ತೆ ಅಗೆಯುವುದು ಮೊದಲಾದ ಸಮಸ್ಯೆಗಳು ಕಂಡುಬರುತ್ತಿದೆ. ಈ ಹಿಂದೆ ಎಡಿಬಿ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ನಡೆಸಿ, ಸುಮಾರು 28 ಕೋಟಿ ರೂ. ನೀರಿನ ಮೇಲೆ ಹೋಮ ಇಟ್ಟಂತಾಗಿದೆ. ಆದ್ದರಿಂದ ಜಲಸಿರಿ ಯೋಜನೆಯನ್ನು ಕಾರ್ಯಗತ ಮಾಡುವವರನ್ನು ಪ್ರಶ್ನಿಸಬೇಕಾಗಿದೆ. ಪೈಪ್‌ಗಳನ್ನು ಆಳಕ್ಕೆ ಹಾಕದೇ ಇರುವುದರಿಂದ, ಮತ್ತೆ ತೊಂದರೆ ಕೊಡುವ ಸಾಧ್ಯತೆ ಇದೆ. ರಸ್ತೆಗಳಲ್ಲಿ ಗುಂಡಿ ತೆಗೆದು, ಅದನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಇದರ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ. ಆದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಜಲಸಿರಿ ಯೋಜನೆಯ ಕಾರ್ಯಗತ ಮಾಡುವವರನ್ನು ಕರೆಸಿ, ಮಾತನಾಡಿಸುವಂತೆ ಒತ್ತಾಯಿಸಿದರು.
ಸದಸ್ಯ ಭಾಮಿ ಅಶೋಕ್ ಶೆಣೈ ಮಾತನಾಡಿ, ಮೀಟರ್‌ಗಳ ಬಳಿ ನೀರಿನ ಲೀಕೇಜ್, ಎತ್ತರದ ಮನೆಗಳಿಗೆ ತಲುಪದ ನೀರು ಮೊದಲಾದ ಸಮಸ್ಯೆಗಳು ಕಂಡುಬರುತ್ತಿದೆ. ಸಾರ್ವಜನಿಕರಿಂದಲೂ ದೂರು ಕೇಳಿಬಂದಿದೆ. ಆದ್ದರಿಂದ ಕಾಮಗಾರಿ ಪೂರ್ಣಗೊಂಡ ಬಳಿಕವೇ, ಮೀಟರ್ ಸಂಪರ್ಕ ಕೊಡಿಸಬೇಕು ಎಂದರು. ಸದಸ್ಯರಾದ ಶಶಿಕಲಾ ಸಿ.ಎಸ್., ಮನೋಹರ್ ಕಲ್ಲಾರೆ ಧ್ವನಿಗೂಡಿಸಿದರು.
ಪ್ಯಾಚ್‌ವರ್ಕಿಗೆ ಹೆಚ್ಚುವರಿ ಅನುದಾನ
ಸಿಟಿ ಆಸ್ಪತ್ರೆಯಿಂದ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ರಸ್ತೆ ಹಾಳಾಗಿದೆ. ನಗರವಿಡೀ ಪ್ಯಾಚ್‌ವರ್ಕ್ ಮಾಡಿದ್ದರೂ, ಈ ಭಾಗದಲ್ಲಿ ಆಗಿಲ್ಲ ಎಂದು ಶಕ್ತಿ ಸಿನ್ಹಾ ಗಮನ ಸೆಳೆದರು. ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷರು, ಪ್ಯಾಚ್‌ವರ್ಕ್ ಕಾಮಗಾರಿಯನ್ನು ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ಹಾಗಿದ್ದರೂ, ಮುಖ್ಯರಸ್ತೆಯ ಪ್ಯಾಚ್‌ವರ್ಕ್ ಮಾಡಿಸುತ್ತಿದ್ದೇವೆ. ಇನ್ನಷ್ಟು ಕಾಮಗಾರಿಗಾಗಿ, 2.50 ಕೋಟಿ ರೂ.ನ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್. ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರ ಅವರು ಸಭಾ ನಡಾವಳಿಯನ್ನು ಮಂಡಿಸಿದರು.
ಸಭೆಯಲ್ಲಿ ಕೇಳಿಬಂದ ಇತರ ವಿಷಯಗಳು
- ಪುತ್ತೂರು ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇಲ್ಲ. ಅದಕ್ಕೆ ಪರ್ಯಾಯ ವ್ಯವಸ್ಥೆ ಆಗಬೇಕು.
- ಕುಡಿಯುವ ನೀರಿನ ವ್ಯವಸ್ಥೆಗಾಗಿ ಟ್ಯಾಂಕ್ ಕೊಡುವುದು ಉತ್ತಮ.
- ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ
- ಆಶ್ರಯ ಯೋಜನೆಯಡಿ ೬೮ ಅರ್ಜಿಗಳು ರೆಡಿಯಾಗಿದ್ದು, ೪೪ ಅರ್ಜಿಗಳು ಅಪ್ಲೋಡ್ ಮಾಡಲಾಗಿದೆ.