ಪುತ್ತೂರು: ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಪ್ರತಿಭಾ ಲಾಲಿತ್ಯ ೨೦೨೨ ಕಾರ್ಯಕ್ರಮ ಡಿ. ೧೯ರಂದು ಶಾಲಾ ಆವರಣದಲ್ಲಿ ನಡೆಯಿತು.
ಇದು ಚಿಗುರು ಪ್ರತಿಭೆಗಳ ಸಂಭ್ರಮದ ದಿನ ವಾಕ್ಯದಡಿ ನಡೆದ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಸರಕಾರಿ ಶಾಲೆಗಳ ಪೈಕಿ ಅತೀ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆ ಎಂಬ ಹೆಗ್ಗಳಿಗೆ ಹಾರಾಡಿಗಿದೆ. ಈ ಶಾಲೆಯಲ್ಲಿ ಕಲಿತ ಮಕ್ಕಳು ದೇಶ ಸೇವೆ ಮಾಡಬೇಕು, ಉತ್ತಮ ಪ್ರಜೆಗಳಾಗಿ ಬೆಳೆಯಬೇಕು. ಈ ದಿಶೆಯಲ್ಲಿ ಸರಕಾರವೂ ಹಲವು ಯೋಜನೆಗಳನ್ನು ನೀಡುತ್ತಿದೆ ಎಂದರು.
ಮಾತೃಭಾಷೆಯಲ್ಲೇ ಕಲಿಸಿ
ನಿವೃತ ಶಿಕ್ಷಣಾಧಿಕಾರಿ ಕಾಂಚನ ಸುಂದರ ಭಟ್ ಮಾತನಾಡಿ, ಭಾಷೆಯ ಅರ್ಥ ಮನವರಿಕೆ ಆಗಬೇಕಾದರೆ ಪ್ರಥಮ ಹಂತದಲ್ಲಿ ಕನ್ನಡ ಶಾಲೆಗಳಿಗೇ ಮಕ್ಕಳನ್ನು ಕಲಿಸಬೇಕು. ೮ನೇ ತರಗತಿಯ ನಂತರ ಬೇಕಾದರೆ ನಿಮಗೆ ಇಷ್ಟ ಬಂದ ಭಾಷೆಯಲ್ಲಿ ಅಭ್ಯಾಸವನ್ನು ಮುಂದುವರಿಸಿ. ದೊಡ್ಡ ದೊಡ್ಡ ಸಂಶೋಧಕರು ಇಂಗ್ಲೀಷ್ ಭಾಷೆಯಲ್ಲಿ ಕಲಿಕೆ ಮಾಡಿಲ್ಲ. ಅವರೆಲ್ಲಾ ಕಲಿತದ್ದು ಮಾತೃಭಾಷೆಯಲ್ಲಿಯೇ ಎನ್ನುವುದನ್ನು ನಾವು ಮರೆಯಬಾರದು ಎಂದರು.
ಶಾಸಕರಿಗೆ ದನ್ಯವಾದ
ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಎಲ್ಲಾ ಶಾಲೆಗಳಲ್ಲಿ ಮಕ್ಕಳ ಕಂಪ್ಯೂಟರ್ ಜ್ಞಾನ ಹೆಚ್ಚಳ ಮಾಡಲಿಕ್ಕಾಗಿ ಸ್ಮಾರ್ಟ್ ಕ್ಲಾಸ್‌ಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ ೨ ಲಕ್ಷ ೭೦ ಸಾವಿರ ರೂ. ಅನುದಾನವನ್ನು ಶಾಸಕರು ನೀಡಿದ್ದಾರೆ. ಅಲ್ಲದೇ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಸಕರು ಮಾಡಿದ್ದಾರೆ. ಆದ್ದರಿಂದ ಶಾಸಕರಾದ ಸಂಜೀವ ಮಠಂದೂರು ಅವರಿಗೆ ವಿಶೇಷ ದನ್ಯವಾದ ಸಲ್ಲಿಸಿದರು.
ನಗರಸಭೆ ಸದಸ್ಯೆ ಪ್ರೇಮಲತಾ ಬಿ ನಂದಿಲ, ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.
ಮುಖ್ಯಗುರು ಕೆ.ಕೆ. ಮಾಸ್ಟರ್ ಶಾಲಾ ವಾರ್ಷಿಕ ವರದಿ ವಾಚಿಸಿದರು.







