ಪುತ್ತೂರು: ಸರಸ್ವತಿ ಚರಿಟೇಬಲ್ ಟ್ರಸ್ಟ್ ಪುತ್ತೂರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆ ಸಹಯೋಗದಲ್ಲಿ ಅಡಿಕೆಯ ಹೊಸ ಬಳಕೆ ವಿಚಾರಗೋಷ್ಠಿಯಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಡಿ. 20ರಂದು ನಡೆಯಿತು.
ದೇಸಿ ಸಂಸ್ಥೆಯ ರುದ್ರಪ್ಪ ಮಾತನಾಡಿ, ನಾವು ಪ್ರತಿ ತಿಂಗಳು 15ರಿಂದ 20 ಕ್ವಿಂಟಾಲ್ ಅಡಿಕೆಯ ಬಣ್ಣ ತಯಾರಿಸಿ, ಬಟ್ಟೆಗಳಿಗೆ ಉಪಯೋಗಿಸುತ್ತಿದ್ದೇವೆ. ಕಳೆದ 18 ವರ್ಷಗಳಿಂದ ದೇಸಿ ಸಂಸ್ಥೆ ಹಾಗೂ ಚರಕ ಸಂಸ್ಥೆ ಒಟ್ಟಾಗಿ ನೈಸರ್ಗಿಕ ಬಣ್ಣಗಳನ್ನು ಬಟ್ಟೆಗಳಿಗೆ ಬಳಕೆ ಮಾಡುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು, ಇಂದು ಯಶಸ್ಸನ್ನು ಕಂಡಿದೆ. ಇದಕ್ಕಾಗಿ ಅಡಿಕೆಯನ್ನು ಬೇಯಿಸಿ ಕೇರಳಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಬಣ್ಣವನ್ನು ತಯಾರಿಸಿ, ಇಲ್ಲಿಗೆ ತಂದು ಬಟ್ಟೆಗಳಿಗೆ ಬಳಕೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಮಾತನಾಡಿ, ಅಡಿಕೆಯ ಉಪಯೋಗ, ವಿವಿಧ ವಸ್ತುಗಳ ತಯಾರಿ, ಬಟ್ಟೆ ತಯಾರಿಗಳ ಮಾಹಿತಿ ನೀಡಿದರು.ಡಾ. ಕೆ. ವಿನಾಯಕ ಹೆಗಡೆ ಮಾತನಾಡಿ, ಅಡಿಕೆಯ ಬಳಕೆಯ ಮಹತ್ವ, ಅಡಿಕೆ ಸಿಪ್ಪೆ, ಅಡಿಕೆ ಸೋಗೆ ಹೀಗೆ ಎಲ್ಲಾದರ ಬಳಕೆಯ ಕಡೆ ಒತ್ತು ನೀಡಬೇಕು. ಇದರಿಂದ ಹೊರಬರುವ ಮೌಲ್ಯವರ್ಧಿತ ಉತ್ಪನ್ನಗಳು, ಅಡಿಕೆ ಬೆಳೆಗೆ ಇನ್ನಷ್ಟು ಬಲ ತುಂಬುವುದರಲ್ಲಿ ಎರಡು ಮಾತಿಲ್ಲ ಎಂದರು.
ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು:
ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗಿದ್ದು, ವಿಚಾರಗೋಷ್ಠಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಕೊಕೊರೇಕಾ ಸಾಬೂನು, ಅರೇಕಾ ಚಾಕೊಲೇಟ್, ಹೋಳಿಗೆ, ಅಡಿಕೆಯಿಂದ ಮಾಡಿದ ಬಟ್ಟೆ, ಆಯುರ್ವೇದಿಕೆ ಮೆಡಿಸಿನ್, ಅಡಿಕೆ ವೈನ್, ವೀಳ್ಯದೆಲೆ ವೈನ್, ಅಡಿಕೆ ಸಿಪ್ಪೆಯ ವೈನ್, ಅಡಿಕೆ ಸಿಪ್ಪೆ ಹಾಗೂ ಬೀಟ್ ರೂಟಿನ ವೈನ್, ಅಡಿಕೆ ಸಿಪ್ಪೆ ಹಾಗೂ ದ್ರಾಕ್ಷಿಯ ವೈನ್ ಹೀಗೆ ನಾನಾ ವೈವಿಧ್ಯ ಉತ್ಪನ್ನಗಳು ಗಮನ ಸೆಳೆದವು.
ಕೃಷಿ ಸಂಶೋಧಕ, ಕೃಷಿಕ ಬದನಾಜೆ ಶಂಕರ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ ಮುಖ್ಯ ಅತಿಥಿಯಾಗಿದ್ದರು.
ಸಿ ಪಿ ಸಿ ಆರ್ ಐ ಹಿರಿಯ ವಿಜ್ಞಾನಿ ಅಶೋಕ್ ಕಿನಿಲ್,ಅಖಿಲ ಭಾರತ ಅಡಿಕೆ ಬೆಲೆಗಾರರ ಸಂಘದ ಅಧ್ಯಕ್ಷರೂ ಪುತ್ತೂರು ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಪಡಾರು ರಾಮಕೃಷ್ಣ ಶಾಸ್ತ್ರಿ, ಸರಸ್ವತಿ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ದೇವಿಪ್ರಸಾದ್ ಉಪಸ್ಥಿತರಿದ್ದರು.ಶ್ರೀಪಡ್ರೆ ಸ್ವಾಗತಿಸಿ, ಮಹೇಶ್ ಪುಚ್ಚಪ್ಪಾಡಿ ವಂದಿಸಿದರು.






