ಪುತ್ತೂರು: ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸುಳ್ಯ ತಾಲೂಕಿನಾದ್ಯಂತ 3 ದಿನಗಳ ಸಮುದಾಯ ಸಮ್ಮಿಲನಕ್ಕಾಗಿ ಮಂಗಳವಾರ ಆಗಮಿಸಿದ್ದು, ಅವರಿಗೆ ನಿಂತಿಕಲ್ಲಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಸುಳ್ಯ ತಾಲೂಕಿಗೆ ಆಗಮಿಸಿದ ಸ್ವಾಮೀಜಿ ಅವರು ಡಿ. 20, 21, 22ರಂದು ಗೌಡ ಸಮುದಾಯದ ವಿವಿಧ ಮನೆಗಳಿಗೆ ತೆರಳಿ ಆಶೀರ್ವಚನ ನೀಡಲಿದ್ದಾರೆ. ಮಂಗಳವಾರವೂ ವಿವಿಧ ಮನೆಗಳಿಗೆ ತೆರಳಲಿದ್ದು, ನಿಂತಿಕಲ್ಲಿನಿಂದ ಅವರನ್ನು ವಾಹನ ಜಾಥದ ಮೂಲಕ ಹರಿಹರಪಲ್ಲತಡ್ಕ ಐನೆಕಿದು ಕಡೆಗೆ ಕರೆದೊಯ್ಯಲಾಯಿತು.
ಮಂಗಳವಾರ ಕಿಶೋರ್ ಕುಮಾರ್ ಕೂಜುಗೋಡು, ನಿತ್ಯಾನಂದ ಮುಂಡೋಡಿ, ಕಿರಣ್ ಬುಡ್ಲೆಗುತ್ತು, ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ, ಎ.ವಿ. ತೀರ್ಥರಾಮ ಅವರ ಮನೆಗಳಲ್ಲಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಬುಧವಾರ ಬೆಳಿಗ್ಗೆ 8.30ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ, ಬಳಿಕ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಾರ್ವಜನಿಕ ಅನುಗ್ರಹ ಸಂದೇಶ ನೀಡಲಿದ್ದಾರೆ.





