ಪುತ್ತೂರು: ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ. ಇದನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ ಹಾಗಾಗಿ ಸುರಕ್ಷಿತ ರಕ್ತದಾನವನ್ನು ಸೇವೆ ಎಂದು ಪರಿಗಣಿಸಲಾಗುತ್ತದೆ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ರಕ್ತ ಕೇಂದ್ರದ ವೈದ್ಯೆ ಡಾ. ಮಾರ್ಟಿನಾ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್‌ಎಸ್‌ಎಸ್ ಘಟಕ, ಯೂತ್ ರೆಡ್-ಕ್ರಾಸ್ ಘಟಕ ಹಾಗೂ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ರಕ್ತ ಕೇಂದ್ರದ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದಿಂದ ಮೂರು ವ್ಯಕ್ತಿಗಳ ಜೀವ ಉಳಿಸಬಹುದು. ನೀಡಿದ ರಕ್ತವನ್ನು ಪರಿಷ್ಕರಿಸಿ ಕೆಂಪು ರಕ್ತಕಣ, ಬಿಳಿ ರಕ್ತಕಣ ಹಾಗೂ ಪ್ಲಾಸ್ಮಾ ಕಣಗಳಾಗಿ ಬೇರ್ಪಡಿಸಿ ರೋಗಿಗಳ ಆವಶ್ಯಕತೆಗೆ ತಕ್ಕಂತೆ ನೀಡಲಾಗುವುದು ಎಂದ ಅವರು, ರಕ್ತದಾನದಂತಹ ಸಮಾಜಮುಖೀ ಕಾರ್ಯದಲ್ಲಿ ಪಾಲ್ಗೊಂಡವರೆಲ್ಲರೂ ಅಭಿನಂದನಾರ್ಹರು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್. ಟಿ.ಎಸ್ ಮಾತನಾಡಿ, ರಕ್ತದಾನ ಮಹಾದಾನ. ಇದು ಮನುಕುಲದ ಜೀವ ಉಳಿಸುವ ಮಹತ್ಕಾರ್ಯ ಎಂದ ಅವರು, ರಕ್ತ ಸಿಗದೇ ಇರುವ ಸಂದರ್ಭದಲ್ಲಿ ಅವಶ್ಯಕತೆಗೆ ತಕ್ಕಂತೆ ರಕ್ತದಾನ ಶಿಬಿರಗಳು ಆವಶ್ಯಕವಾಗುತ್ತದೆ. ಪ್ರತಿವರ್ಷ ಕಾಲೇಜಿನಲ್ಲಿ 3 ರಿಂದ 4 ಬಾರಿ ಇಂತಹ ಶಿಬಿರಗಳನ್ನು ಸಂಯೋಜಿಸಿ ಅರ್ಹರು ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಂಯೋಜಕಿ ಪ್ರೊ. ನಿಶಾ ಜಿ.ಆರ್. ಸ್ವಾಗತಿಸಿ, ಯೂತ್ ರೆಡ್-ಕ್ರಾಸ್ ಘಟಕದ ಸಂಯೋಜಕ ಪ್ರೊ. ಅಭಿಷೇಕ್ ವಂದಿಸಿದರು. ವಿದ್ಯಾರ್ಥಿನಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.