ಭಾರತ ರಜತ ಪರದೆಯ ಮೊದಲ ನಾಯಕಿ ದೇವಿಕಾ ರಾಣಿ ರೋರಿಚ್

ಸಿನೆಮಾದಲ್ಲಿ ಹುಡುಗಿಯರು ನಟಿಸುವುದು ಅಪರಾಧ ಎಂಬ ಕಾಲದಲ್ಲಿ ಆಕೆ ಸೂಪರ್ ಸ್ಟಾರ್ ಆಗಿ ಮೆರೆದಿದ್ದರು!

ಇದನ್ನು ಹೇಳಿದರೆ ನೀವು ಖಂಡಿತವಾಗಿ ನಗಬಹುದು, ಆದರೆ ಆ ಕಾಲ ಹಾಗಿತ್ತು.
ಶತಮಾನದ ಹಿಂದೆ ಭಾರತದಲ್ಲಿ ದಾದಾಸಾಹೇಬ್ ಫಾಲ್ಕೆ ಅವರು ‘ರಾಜಾ ಹರಿಶ್ಚಂದ್ರ ‘ ಸಿನೆಮಾ ಮಾಡಲು ಹೊರಟಾಗ ಚಂದ್ರಮತಿಯ ಪಾತ್ರದಲ್ಲಿ ಅಭಿನಯ ಮಾಡಲು ಯಾವ ಹುಡುಗಿಯೂ ಮುಂದೆ ಬರಲಿಲ್ಲ. ಹಲವು ಬಾರಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರೂ ಯಾರೂ ರೆಸ್ಪಾನ್ಸ್ ಮಾಡಲಿಲ್ಲ. ಕೊನೆಗೆ ಅಡುಗೆ ಮಾಡಲು ಬಂದಿದ್ದ ಒಬ್ಬ ಚಂದದ ಹುಡುಗನಿಗೆ ಸೀರೆ ತೊಡಿಸಿ ಚಂದ್ರಮತಿಯ ಪಾತ್ರವನ್ನು ಮಾಡಿಸಬೇಕಾಯಿತು. ಅದು ಭಾರತದ ಮೊದಲ ಸಿನೆಮಾ ಆಗಿತ್ತು.

ಅಂತಹ ಕಾಲದಲ್ಲಿ ಆಕೆ ನಾಯಕಿ ಆಗಿ ಮೆರೆದಿದ್ದರು































 
 

ದೇವಿಕಾ ರಾಣಿ ಭಾರತದ ಸಿನೆಮಾ ರಂಗ ಕಂಡ ಮೊತ್ತ ಮೊದಲ ಆಧುನಿಕ ನಾಯಕಿ ಎಂಬ ಕೀರ್ತಿಯನ್ನು ಪಡೆದಿದ್ದಾರೆ. ಆಕೆ ಜನಿಸಿದ್ದು ಆಂಧ್ರ ಪ್ರದೇಶದ ವಿಶಾಖಪಟ್ಟಣದ ವಾಲ್ಟೇರ್ ಎಂಬಲ್ಲಿ 1908 ಮಾರ್ಚ್ 30ರಂದು. ತಂದೆ ಬಹುಪ್ರಸಿದ್ದ ಸರ್ಜನ್ ಆಗಿದ್ದವರು. ಆಕೆ ಮೂಲತಃ ಬೆಂಗಾಲಿ. ಸಂಬಂಧದಲ್ಲಿ ರವೀಂದ್ರನಾಥ್ ಠಾಗೋರ್ ಅವರ ಮರಿ ಮೊಮ್ಮಗಳು. ಶ್ರೀಮಂತಿಕೆ ಅವರ ಮನೆಯ ಪಡಸಾಲೆಯಲ್ಲಿ ಕಾಲು ಮುರಿದುಕೊಂಡುಬಿದ್ದಿತ್ತು.
ಆಕೆ ವಿದೇಶಗಳಿಗೆ ಹೋಗಿ ಸಿನೆಮಾ ಮೇಕಿಂಗ್ ಕಲಿತು ಬಂದಿದ್ದರು
ಆಕೆ ತನ್ನ ಒಂಬತ್ತನೆಯ ವಯಸ್ಸಿಗೆ ಲಂಡನ್ನಿಗೆ ಹೋಗಿ ನಾಟಕ, ಸಂಗೀತ ಶಾಲೆಯನ್ನು ಸೇರಿದರು. ರಂಗಭೂಮಿ, ವಾಸ್ತುಶಾಸ್ತ್ರ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆ, ಪ್ರಸಾದನ ಕಲೆ ಎಲ್ಲವನ್ನೂ ಕಲಿತರು.
ಅದೇ ಹೊತ್ತಿಗೆ ಬ್ಯಾರಿಸ್ಟರ್ ಆಗುವ ಕನಸು ಹೊತ್ತು ಲಂಡನ್ನಿಗೆ ಬಂದಿದ್ದ ಹಿಮಾಂಶು ರಾಯ್ ಎಂಬ ಚಂದದ ತರುಣನ ಪ್ರೀತಿಯ ಬಲೆಗೆ ಬಿದ್ದರು. ಅವರ ಮದುವೆ ಕೂಡ ನಡೆದು ಹೋಯಿತು. ಆತ ದೇವಿಕಾ ಅವರಿಗಿಂತ 16 ವರ್ಷ ದೊಡ್ಡವನು, ಮತ್ತು ಅವನಿಗೆ ಮೊದಲೇ ಮದುವೆ ಆಗಿ ಒಂದು ಮಗು ಕೂಡ ಇತ್ತು. ಗಂಡ, ಹೆಂಡತಿ ಇಬ್ಬರೂ ಜರ್ಮನಿಗೆ ಹೋಗಿ ಸಿನೆಮಾ ನಿರ್ಮಾಣದ ಕಲೆಯನ್ನು ಕಲಿತರು. ದೇವಿಕಾ ರಾಣಿ ಆಗ ಹಲವು ಅಮೇರಿಕನ್ ಮತ್ತು ಜರ್ಮನ್ ಭಾಷೆಯ ಸಿನೆಮಾಗಳಲ್ಲಿ ಅಭಿನಯ ಮಾಡಿದರು ಅಂದರೆ ನಮಗೆ ಆಶ್ಚರ್ಯ ಆಗುತ್ತದೆ.
A Throw Of Dice ಎಂಬ ಇಂಗ್ಲಿಷ್ – ಹಿಂದಿ ಭಾಷೆಯ ಸಿನೆಮಾದಲ್ಲಿ ಆಕೆ ಮೊದಲ ಬಾರಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಾರೆ. ಅದರ ಬೆನ್ನಿಗೆ ‘ಕರ್ಮಾ’ ಎಂಬ ಸಿನೆಮಾದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಜೊತೆಯಾಗಿ ಅಭಿನಯ ಮಾಡುತ್ತಾರೆ. ಆಕೆಯ ಸ್ಕ್ರೀನ್ ಅಪಿಯರೆನ್ಸ್ ಮತ್ತು ಸೌಂದರ್ಯ ನೋಡಿದ ಲಂಡನ್ನಿನ ಡೈಲಿ ಸರ್ಚ್ ಎಂಬ ಜನಪ್ರಿಯ ಪತ್ರಿಕೆಯು ‘ಸೌಂದರ್ಯದ ಸುನಾಮಿ’ ಎಂದು ಆಕೆಯನ್ನು ಬಣ್ಣಿಸಿತು. ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ ಆಂಗ್ಲರು ಆಕೆಯನ್ನು ಸೌಂದರ್ಯದ ಶಿಖರ ಎಂದು ಆರಿಸಿಕೊಂಡದ್ದು ನಿಜಕ್ಕೂ ಶ್ಲಾಘನೀಯ ಘಟನೆ.
‘ಬೆಳ್ಳಿಪರದೆ ಅಲಂಕರಿಸಿದ ಅತೀ ಸುಂದರ ಮಹಿಳೆ ಎಂದರೆ ದೇವಿಕಾ ರಾಣಿ ಮಾತ್ರ’ ಎಂದು ಲಂಡನ್ನಿನ ಪತ್ರಿಕೆಗಳು ಆಕೆಯನ್ನು ಹೊಗಳಿ ಬರೆದವು. ವಿದೇಶದಲ್ಲಿ ಬಂಗಾರದಂತಹ ಅವಕಾಶಗಳು ಇದ್ದರೂ ಒನ್ ಫೈನ್ ಡೇ ಗಂಡ ಮತ್ತು ಹೆಂಡತಿ ಗಟ್ಟಿ ನಿರ್ಧಾರ ಮಾಡಿ ಭಾರತಕ್ಕೆ ಬರುತ್ತಾರೆ.

ಅಂಧ ಶ್ರದ್ದೆಗಳ ಕಾಲ ಅದು

ಆಗ ಭಾರತೀಯ ಸಿನೆಮಾ ರಂಗವಿನ್ನೂ ಅಂಬೆಗಾಲು ಇಡುತಿತ್ತು. ಸಂಪ್ರದಾಯಸ್ಥ ಕುಟುಂಬದ ಹೆಣ್ಮಕ್ಕಳು ಸಿನೆಮಾದಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಿದ್ದರು. ಸಿನೆಮಾ ನಟಿಯರನ್ನು ಜನರು ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ತನ್ನ ಬಾಲ್ಯದಿಂದಲೂ ಆಧುನಿಕ ಮನೋಭಾವದಲ್ಲಿ ಬೆಳೆದಿದ್ದ ದೇವಿಕಾ ರಾಣಿ ಇದರಿಂದ ತುಂಬಾನೆ ನೊಂದುಕೊಂಡರು. ಆಗ ಭಾರತದಲ್ಲಿ ಸುಸಜ್ಜಿತ ಫಿಲ್ಮ್ ಸ್ಟುಡಿಯೋ ಇರಲಿಲ್ಲ. ಅದನ್ನು ಮನಗಂಡು ಹಿಮಾಂಶು ಮತ್ತು ದೇವಿಕಾ ಜತೆಗೂಡಿ ಮುಂಬೈಯ ಮಲಾಡ್ ಎಂಬಲ್ಲಿ 18 ಎಕರೆ ಜಾಗ ಖರೀದಿಸಿ ಭಾರತದ ಮೊತ್ತ ಮೊದಲ ಸ್ಟುಡಿಯೋ ‘ಬೊಂಬೆ ಟಾಕೀಸ್ ‘ ಸ್ಥಾಪನೆ ಮಾಡಿದರು. ಭಾರತದ ಮೊದಲ ಅತ್ಯಾಧುನಿಕ ಸ್ಟುಡಿಯೋ ಅದು. ಇದರಿಂದ ಭಾರತದಲ್ಲಿ ಸಿನೆಮಾ ನಿರ್ಮಾಣಕ್ಕೆ ಭಾರಿ ವೇಗ ದೊರೆಯಿತು.

ದೇವಿಕಾ ರಾಣಿ ಅವರ ಅಭಿನಯಕ್ಕೆ ನೆಹರೂ ಫಿದಾ ಆದರು!

ದೇವಿಕಾ ರಾಣಿ ಭಾರತಕ್ಕೆ ಹಿಂದಿರುಗಿ ಬಂದ ನಂತರ ‘ಅಚೂತ್‌ ಕನ್ಯಾ’ ಎಂಬ ಕ್ರಾಂತಿಕಾರಿಯಾದ ಸಿನೆಮಾದಲ್ಲಿ ಅಭಿನಯ ಮಾಡಿದರು. ಒಬ್ಬ ಅಸ್ಪೃಶ್ಯ ಹುಡುಗಿ ಮೇಲ್ಜಾತಿಯ ಹುಡುಗನನ್ನು ಪ್ರೀತಿ ಮಾಡುವ ಕಥೆ ಅದು. ಅಶೋಕ ಕುಮಾರ ಮೊದಲ ಬಾರಿ ಹೀರೊ ಆದ ಸಿನೆಮಾ ಅದು. ಆ ಸಿನೆಮಾ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿತು. ದೇವಿಕಾ ರಾಣಿಯ ಸೌಂದರ್ಯ ಮತ್ತು ಅಭಿನಯ ದೇಶದಲ್ಲಿ ಮನೆ ಮಾತಾಯಿತು. ಪಂಡಿತ್ ಜವಾಹರಲಾಲ್ ನೆಹರೂ ಅವರು ರಾಕ್ಸಿ ಚಿತ್ರಮಂದಿರದಲ್ಲಿ ಅಚೂತ್ ಕನ್ಯಾ ಸಿನೆಮಾ ನೋಡಿ ‘ನಾನು ದೇವಿಕಾ ರಾಣಿಯ ದೊಡ್ಡ ಅಭಿಮಾನಿ ‘ಎಂದು ಹೇಳಿದ್ದರು. ಅದೇ ಅಶೋಕ ಕುಮಾರ್ ಮತ್ತು ದೇವಿಕಾ ರಾಣಿ ಜೋಡಿ ಮುಂದೆ 10 ಸಿನೆಮಾಗಳಲ್ಲಿ ಜೊತೆ ಆಗಿ ನಟಿಸಿತು.

ಒಂದರ ಹಿಂದೆ ಒಂದು ಸೂಪರ್ ಹಿಟ್ ಸಿನೆಮಾ!

ಮುಂದೆ ತಮ್ಮದೇ ಆದ ಬಾಂಬೆ ಟಾಕೀಸ್ ಬ್ಯಾನರಿನಲ್ಲಿ ಒಂದಷ್ಟು ಹಿಂದಿ, ಬೆಂಗಾಳಿ ಸೂಪರ್ ಹಿಟ್ ಸಿನೆಮಾಗಳು ತೆರೆಗೆ ಬಂದವು. ಜೀವನ್ ನಯ್ಯಾ, ಜವಾನಿ ಕಿ ಹವಾ, ನಿರ್ಮಲಾ, ಜನ್ಮಭೂಮಿ, ಪ್ರೇಮ ಸನ್ಯಾಸ, ಇಜ್ಜತ್, ದುರ್ಗಾ, ಸಾವಿತ್ರಿ, ಜೀವನ್ ಪ್ರಭಾತ್, ವಚನ್, ಅಂಜಾನ್, ಹಮಾರಿ ಬಾತ್… ಹೀಗೆ ಒಂದಕ್ಕಿಂತ ಒಂದು ವಿಭಿನ್ನವಾದ ಸಿನೆಮಾಗಳು. ಆಕೆಗೆ ವಿಭಿನ್ನವಾದ ಪಾತ್ರಗಳು. ಇಡೀ ಭಾರತ ದೇವಿಕಾ ರಾಣಿಯ ಪ್ರತಿಭೆ ಮತ್ತು ಸೌಂದರ್ಯಕ್ಕೆ ಫಿದಾ ಆಗಿತ್ತು!
ಅಶೋಕ್ ಕುಮಾರ್, ದಿಲೀಪ್ ಕುಮಾರ್, ಲೀಲಾ ಚೆಟ್ನೀಸ್, ದುರ್ಗಾ ಕೋಟೆ ಮೊದಲಾದ ಪ್ರಸಿದ್ಧ ನಟ, ನಟಿಯರು ಬಾಂಬೆ ಟಾಕೀಸ್ ಬ್ಯಾನರಿನ ಸಿನೆಮಾದಲ್ಲಿ ಮೊದಲಾಗಿ ಅಭಿನಯಿಸಿದ್ದರು. ತನ್ನದೇ ಅಭಿನಯದ ಹಲವು ಸಿನೆಮಾಗಳಲ್ಲಿ ಆಕೆ ಹಲವು ಹಾಡುಗಳನ್ನು ಕೂಡ ಹಾಡಿದ್ದಾರೆ. ಬಾಂಬೆ ಟಾಕೀಸ್ ಬ್ಯಾನರಿನಲ್ಲಿ ಆಕೆ 15 ಅತ್ಯಂತ ಜನಪ್ರಿಯವಾದ ಸಿನೆಮಾಗಳನ್ನು ನಿರ್ಮಾಣ ಕೂಡ ಮಾಡಿದ್ದರು. ಎಲ್ಲವೂ ಆ ಕಾಲದ ಸ್ಮರಣೀಯ ದಾಖಲೆಗಳು.

ದೇವಿಕಾ ರಾಣಿ ರೋರಿಚ್ ಆದರು.

ಮುಂದೆ ಹಿಮಾಂಶು ರಾಯ್ ನಿಧನರಾದ ನಂತರ ಸಿನೆಮಾ ಚಟುವಟಿಕೆಗಳಿಗೆ ಬೆನ್ನು ಹಾಕಿದ ದೇವಿಕಾ ರಾಣಿ ಜನಪ್ರಿಯತೆಯ ತುತ್ತ ತುದಿಯಲ್ಲಿ ಇರುವಾಗಲೇ ನಿವೃತ್ತರಾದರು. ತನ್ನ ಇಳಿವಯಸ್ಸಿನಲ್ಲಿ ರಷ್ಯದ ಲೆಜೆಂಡ್ ಚಿತ್ರ ಕಲಾವಿದ ಸ್ವೆತೋಸ್ಲಾವ್ ರೋರಿಚ್ ಅವರನ್ನು ಮದುವೆಯಾದ ನಂತರ ಆಕೆ ದೇವಿಕಾ ರಾಣಿ ರೋರಿಚ್ ಎಂದು ತನ್ನನ್ನು ಕರೆಸಿಕೊಂಡರು.

ಹಲವು ಕೀರ್ತಿಗಳು, ಹಲವು ಪ್ರಶಸ್ತಿಗಳು!

1958ರ ಪದ್ಮಶ್ರೀ ಪ್ರಶಸ್ತಿ ಆಕೆಗೆ ಒಲಿದು ಬಂದಿತು. 1970ರಲ್ಲಿ ಸಿನೆಮಾರಂಗಕ್ಕೆ ಅತಿ ಮಹತ್ವದ ಕೊಡುಗೆ ನೀಡಿದ (ಕೇವಲ) ಒಬ್ಬರಿಗೆ ನೀಡಲಾಗುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯ ಸ್ಥಾಪನೆ ಆಯಿತು. ಮೊದಲ ವರ್ಷದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವವನ್ನು ಕೂಡ ಆಕೆ ಪಡೆದುಕೊಂಡು ಕೀರ್ತಿಯ ಶಿಖರ ಏರಿದರು. 1990ರಲ್ಲಿ ಆಕೆಗೆ ಸೋವಿಯೆತ್ ಲ್ಯಾಂಡ್ ನೆಹರೂ ಪುರಸ್ಕಾರ ಕೂಡ ದೊರೆಯಿತು.
1994 ಮಾರ್ಚ್ 9ರಂದು ದೇವಿಕಾ ರಾಣಿ ತನ್ನ ಇಹಲೋಕದ ವ್ಯಾಪಾರ ಮುಗಿಸಿದರು.
ಭಾರತೀಯ ಸಿನಿಮಾರಂಗದ ಆರಂಭದ ದಿನಗಳಲ್ಲಿ ಸಿನೆಮಾಗಳಿಗೆ ಆಧುನಿಕ ಸ್ಪರ್ಶವನ್ನು ನೀಡಿದ ಕೀರ್ತಿ ಪಡೆದು ದೇವಿಕಾ ರಾಣಿ ನಿಜವಾದ ಐಕಾನ್ ಆದರು. ಅವರಿಗೆ ನಮ್ಮ ಶ್ರದ್ಧಾಂಜಲಿ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top