ಪುತ್ತೂರು: ಬಿಜೆಪಿ ಪ್ರಮುಖರು ಹಾಗೂ ಪಕ್ಷದ ಬಗ್ಗೆ ಜರೆದು, ಅಶಿಸ್ತಿನಿಂದ ಮಾತನಾಡಿದ್ದ ಬಿಜೆಪಿ ಕಾರ್ಯಕರ್ತ, ಕೆಡಿಪಿ ಸದಸ್ಯ ಅಬ್ದುಲ್ ಕುಂಞಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಸದರು, ಶಾಸಕರಾದಿಯಾಗಿ ಬಿಜೆಪಿ ಪ್ರಮುಖರ ಬಗ್ಗೆ ಅಶಿಸ್ತಿನಿಂದ ಮಾತನಾಡಿದ್ದು ಮಾತ್ರವಲ್ಲ, ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆಯೂ ಆಧಾರರಹಿತ ಹೇಳಿಕೆ ನೀಡಿರುವುದು ಆಡಿಯೋದಲ್ಲಿ ದಾಖಲಾಗಿತ್ತು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಪುತ್ತೂರು ಬಿಜೆಪಿ ಮಂಡಲದ ಪ್ರಮುಖರು ಶಿಸ್ತಿನ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾ ಘಟಕಕ್ಕೆ ಶಿಫಾರಸು ಕಳುಹಿಸಿದ್ದರು. ಪುತ್ತೂರು ಮಂಡಲದ ಶಿಫಾರಸನ್ನು ಎತ್ತಿ ಹಿಡಿದಿರುವ ಬಿಜೆಪಿ ಜಿಲ್ಲಾ ಘಟಕ, ಶಿಸ್ತು ಕ್ರಮ ಕೈಗೊಂಡಿದೆ.
ಬಿಜೆಪಿ ಪಕ್ಷದಲ್ಲಿ ಗುರುತಿಸಲ್ಪಟ್ಟಿದ್ದ ಅಬ್ದುಲ್ ಕುಂಞಿ ಅವರನ್ನು ಕರೆದು ಕೆಡಿಪಿ ಸದಸ್ಯತನವನ್ನು ಪಕ್ಷ ನೀಡಿತ್ತು. ಅಲ್ಲದೇ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪುತ್ತೂರು ಉಪಾಧ್ಯಕ್ಷರನ್ನಾಗಿಯೂ ನೇಮಕ ಮಾಡಿತ್ತು. ಆದರೆ ಇದರ ಬಗ್ಗೆ ಕೃತಜ್ಞತೆ ಹೊಂದಿರದ ಅಬ್ದುಲ್ ಕುಂಞಿ ಅವರು, ಪಕ್ಷದ ವಿರುದ್ಧವೇ ಮಾತನಾಡಿದ್ದರು. ಪಕ್ಷದ ಒಳಗಿದ್ದುಕೊಂಡೇ ಪಕ್ಷ ಹಾಗೂ ಪಕ್ಷ ಪ್ರಮುಖರ ಬಗ್ಗೆ ಅವಹೇಳನದ ಮಾತುಗಳನ್ನು ಹೇಳಿರುವ ಅಬ್ದುಲ್ ಕುಂಞಿ ಅವರಂತಹವರನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಿದೆ.
ಮೊದಲಿಗೆ ಆಡಿಯೋದ ಸತ್ಯಾಸತ್ಯತೆ ಬಗ್ಗೆಯೂ ಸಾಕಷ್ಟು ಗೊಂದಲ ಮೂಡಿತ್ತು. ಅಬ್ದುಲ್ ಕುಂಞಿ ಅವರು, ಆಡಿಯೋದಲ್ಲಿರುವುದು ತನ್ನ ಧ್ವನಿಯಲ್ಲ ಎಂಬುದಾಗಿಯೂ ತಿಳಿಸಿದ್ದರು. ಬಿಜೆಪಿ ಪ್ರಮುಖರು ಆಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಆಡಿಯೋದಲ್ಲಿರುವುದು ಅಬ್ದುಲ್ ಕುಂಞಿ ಅವರದ್ದೇ ಧ್ವನಿ ಎನ್ನುವುದನ್ನು ಖಾತ್ರಿ ಪಡಿಸಿದ್ದಾರೆ. ಆದ್ದರಿಂದ ಶಿಸ್ತು ಕ್ರಮವನ್ನು ಜಾರಿಗೊಳಿಸಿದ್ದಾರೆ. ಈ ಮೂಲಕ ಶಿಸ್ತಿಗೆ ಹೆಸರಾದ ಬಿಜೆಪಿ ಪಕ್ಷದಲ್ಲಿ, ಇಂತಹ ಹೇಳಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಸಾಬೀತು ಪಡಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರಿಂದ ಆದೇಶ
ಅಬ್ದುಲ್ ಕುಂಞಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪುತ್ತೂರು ಮಂಡಲ ಬಿಜೆಪಿಯಿಂದ ಜಿಲ್ಲಾ ಘಟಕಕ್ಕೆ ಶಿಫಾರಸು ಮಾಡಲಾಗಿತ್ತು. ಆಡಿಯೋದಲ್ಲಿ ಮಾತನಾಡಿರುವುದು ತಾನಲ್ಲ ಎಂದು ಅಬ್ದುಲ್ ಕುಂಞಿ ಅವರು ಹೇಳಿದ್ದರೂ, ಅದು ಅವರದ್ದೇ ಮಾತು ಎನ್ನುವುದು ಖಾತ್ರಿಯಾಗಿದೆ. ಓರ್ವ ಕಾರ್ಯಕರ್ತನಾಗಿ ಪಕ್ಷ ಹಾಗೂ ಪಕ್ಷದ ಪ್ರಮುಖರ ಬಗ್ಗೆ ಅಶಿಸ್ತಿನಿಂದ ಮಾತನಾಡಿರುವುದು ಸರಿಯಲ್ಲ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ, ಬಿಜೆಪಿ ಜಿಲ್ಲಾಧ್ಯಕ್ಷರು ಅಬ್ದುಲ್ ಕುಂಞಿ ಅವರನ್ನು ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.
- ಸಾಜ ರಾಧಾಕೃಷ್ಣ ಆಳ್ವ, ಅಧ್ಯಕ್ಷರು, ಪುತ್ತೂರು ಬಿಜೆಪಿ ಮಂಡಲ