ಪುತ್ತೂರು: ಗಡಿಭಾಗವಾದ ಪಾಣಾಜೆ – ಬೆಟ್ಟಂಪಾಡಿ ಜನರು ರಾಜ್ಯ ರಾಜಧಾನಿಯನ್ನು ಸುಲಭವಾಗಿ ಸಂಪರ್ಕ ಸಾಧಿಸುವಂತಾಗಬೇಕು ಎಂಬ ದೃಷ್ಟಿಯಿಂದ ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚ್ ಬಸ್ ಆರಂಭವಾಗಿದೆ. ಪಾಣಾಜೆ ಪರಿಸರದ ಜನರ ಬೇಡಿಕೆಗೆ ಮನ್ನಣೆ ದೊರೆತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಬಸ್ ಸೇವೆಗೆ ಡಿ. 16ರಂದು ರಾತ್ರಿ ಪಾಣಾಜೆಯಲ್ಲಿ ತೆಂಗಿನಕಾಯಿ ಒಡೆದು ಚಾಲನೆ ನೀಡಿ, ಮಾತನಾಡಿದರು.
ಪಾಣಾಜೆ ಭಾಗದ ಜನರು ಬೆಂಗಳೂರಿಗೆ ತೆರಳುಬೇಕು ಎಂದರೆ, ಪುತ್ತೂರಿನಿಂದ ಬಸ್ ಹಿಡಿಯಬೇಕಿತ್ತು. ಸರಿಯಾದ ಸಮಯಕ್ಕೆ ಪುತ್ತೂರಿಗೆ ಬರಲು ಸಾಧ್ಯವಾಗದೇ ಇದ್ದಂತಹ ಸಮಸ್ಯೆಗಳು ಎದುರಾಗಿತ್ತು. ಆದರೆ ಮುಂದೆ ಇಂತಹ ಸಮಸ್ಯೆ ಇರುವುದಿಲ್ಲ. ಮುಂದೆ, ಈ ಬಸ್ಸನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಾಣಾಜೆ ಭಾಗದವರು ಈ ಬಸ್ ಸೇವೆಯನ್ನು ಬಳಸಿಕೊಳ್ಳಬೇಕು ಎಂದರು.
ನಮ್ಮೂರಿನ ಹಲವು ಮಂದಿ ಬೆಂಗಳೂರಿನಲ್ಲಿ ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿದ್ದಾರೆ. ಇವರು ನೇರವಾಗಿ ತಮ್ಮ ಊರಿಗೆ ಬರಲು ಈ ಬಸ್ ಸೇವೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದ ಜನರು ನೇರವಾಗಿ ಬೆಂಗಳೂರಿಗೆ ತೆರಳಲು ಇದು ಅನುಕೂಲವಾಗಿದೆ ಎಂದರು.
ರಸ್ತೆ ಸಮಸ್ಯೆ ಪರಿಹಾರಕ್ಕೆ ಅದಾಲತ್
ಪಾಣಾಜೆ ಭಾಗದ ರಸ್ತೆ ಸಮಸ್ಯೆಯ ಬಗ್ಗೆ ಈಗಾಗಲೇ ಮನವಿ ಬಂದಿದೆ. ಸಮಸ್ಯೆ ಪರಿಹಾರದ ಹಿನ್ನೆಲೆಯಲ್ಲಿ 15 ದಿನದೊಳಗೆ ಅದಾಲತ್ ನಡೆಸಲಾಗುವುದು. ಅದಾಲತ್ ನಲ್ಲಿ ಸಮಸ್ಯೆ ಪರಿಹಾರಗೊಳ್ಳುವ ಸಾಧ್ಯತೆ ಇದೆ ಎಂದು ಶಾಸಕರು ತಿಳಿಸಿದರು.
ಸ್ಯಾಟಲೈಟಿನಿಂದ ಹಿಂದಕ್ಕೆ
ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ್ ಮಾತನಾಡಿ, ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ ಮಾತ್ರ ಕೆ.ಎಸ್.ಆರ್.ಟಿ.ಸಿ.ಗೆ ಆದಾಯ ಬರಲಿದೆ. ಈ ಆದಾಯದ ಹಿನ್ನೆಲೆಯಲ್ಲಿ ಬಸ್ ಸಂಚಾರದ ಅವಧಿ, ದಿನ ನಿಗದಿಗೊಳ್ಳುತ್ತದೆ. ಸದ್ಯ ಬಸ್ ಪುತ್ತೂರಿನಿಂದ ರಾತ್ರಿ 8.20ಕ್ಕೆ ಹೊರಟು, ಪಾಣಾಜೆಯಿಂದ 9 ಗಂಟೆಗೆ ಬೆಂಗಳೂರು ಕಡೆ ಹೊರಡಲಿದೆ. ಸುಳ್ಯ – ಮಡಿಕೇರಿ – ಮೈಸೂರು ಮಾರ್ಗವಾಗಿ ಬೆಂಗಳೂರು ಕೆಬಿಎಸ್ (ಕೆಂಪೇಗೌಡ ಬಸ್ ನಿಲ್ದಾಣ) ತಲುಪಲಿದೆ. ಹಿಂದಿರುಗಿ ಬರುವಾಗ ಸ್ಯಾಟಲೈಟ್ ನಿಂದ ಬಸ್ ಹೊರಡಲಿದೆ ಎಂದು ಮಾಹಿತಿ ನೀಡಿದರು.
ಪುರೋಹಿತರಾದ ಶಿವಶಂಕರ ಕಾರಂತ್ ವೈದಿಕ ವಿಧಿವಿಧಾನ ನೆರವೆರಿಸಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ ವಂದಿಸಿದರು.