ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಿಲಾನ್ಯಾಸಕ್ಕೆ ತೆರಳಿದ ಶಾಸಕರನ್ನು ಭೇಟಿಯಾದ ಆಶಾ ಕಾರ್ಯಕರ್ತೆಯರು, ತಮ್ಮ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಸ್ಪಂದಿಸಿದ ಶಾಸಕ ಸಂಜೀವ ಮಠಂದೂರು ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಡಿ. 19ರಿಂದ 30ರವರೆಗೆ ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ವೈದ್ಯಕೀಯ ಸೌಲಭ್ಯ, ಸೂಕ್ತ ವೇತನ ಸೇರಿದಂತೆ ಸರಕಾರಿ ನೌಕರರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಆಶಾ ಕಾರ್ಯಕರ್ತೆಯರಿಗೂ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದರು. ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಆಶಾ ಕಾರ್ಯಕರ್ತೆಯರು ಜನಮನ್ನಣೆಯೊಂದಿಗೆ ಗೌರವಧನ ಪಡೆಯುತ್ತಿದ್ದಾರೆ. ಸಿಗುವ ಗೌರವಧನಕ್ಕಷ್ಟೇ ತಮ್ಮ ಕೆಲಸವನ್ನು ಸೀಮಿತ ಮಾಡದೇ, ತಾವು ಗ್ರಾಮದ ಪ್ರತಿಯೋರ್ವ ಜನರೊಂದಿಗೆ ಬರೆಯುತ್ತಾ, ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ಮುಂದಿಟ್ಟಿರುವ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಶಿಲಾನ್ಯಾಸ ಕಾರ್ಯಕ್ರಮ
ಬನ್ನೂರು ಗ್ರಾಮದ ವಿವಿಧ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದರು. ಅನಿಲಕೋಡಿ ಕುಂಜೂರು ರಸ್ತೆಗೆ 10 ಲಕ್ಷ ರೂ., ದಾರಂದಕುಕ್ಕು ಕುಂಜೂರು ದೈವಸ್ಥಾನದ ರಸ್ತೆಗೆ 10 ಲಕ್ಷ ರೂ., ಕುಂಟ್ಯಾನ ಸದಾಶಿವ ದೇವಸ್ಥಾನದ ತಡೆಗೋಡೆಗೆ 20 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಬೂತ್ ಅಧ್ಯಕ್ಷ ತಿಮಪ್ಪ ಗೌಡ ಪುಲುವಾರು, ಕಾರ್ಯದರ್ಶಿ ಚಿದಾನಂದ ಬೀರಿಗ, ಗ್ರಾಮ ಪಂಚಾಯತ್ ಅಧ್ಯಕ್ಷ ಜಯ ಏಕ, ಬನ್ನೂರು ಬೂತ್ ಅಧ್ಯಕ್ಷ ರಮೇಶ್ ಪಲ್ತೀಜಲ್, ಗ್ರಾಮ ಪಂಚಾಯತ್ ಸದಸ್ಯ ಶಿನಪ್ಪ ಕುಲಾಲ್, ದೇವಸ್ಥಾನ ಆಡಳಿತ ಮೊಕ್ತೇಸರ ರಾಮ್ಮಣ್ಣ ಗೌಡ ಹಲಂಗ, ಹರಿಣಾಕ್ಷಿ,ಸೂರಜ್ ಗೌಡ ಗೊಳ್ತಿಲ, ಈಶ್ವರ ಗೌಡ ಗೊಳ್ತಿಲ, ಪಲಾನುಭವಿಗಳು, ಊರವರು ಉಪಸ್ಥಿತರಿದ್ದರು.