ಇನ್ನು ಕೆಲವೇ ದಿನಗಳಲ್ಲಿ ನಾವು 2023ನ್ನು ಸ್ವಾಗತಿಸಲಿದ್ದೇವೆ. ಮೊನ್ನೆ ತಾನೇ 2022 ವರ್ಷ ಶುರುವಾದದ್ದು ಎಂದು ಅನ್ನಿಸುತ್ತಿಸರಬೇಕು. ಹೌದು ಒಂದು ವರ್ಷ ಬಹುಬೇಗನೆ ಕಳೆದು ಹೋಗುತ್ತದೆ. ಆದ್ದರಿಂದ ನಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡದೆ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಾ ನಮ್ಮ ತಪ್ಪುಗಳನ್ನು ತಿದ್ದುತ್ತ ಒಳ್ಳೆಯ ರೀತಿಯಲ್ಲಿ ಕಾಲವನ್ನು ಉಪಯೋಗಿಸೋಣ. ವರ್ಷ ಕಳೆದಂತೆ ನಮ್ಮ ಆಯಸ್ಸು ಹೆಚ್ಚುತ್ತದೆ. ವಯಸ್ಸಾದಂತೆ ನಮ್ಮ ಆರೋಗ್ಯವು ಕ್ಷೀಣಿಸುತ್ತದೆ. ನಮ್ಮ ಆಯುಸ್ಸನ್ನು ವೃದ್ಧಿಸುವ ಉಪಾಯವನ್ನು ಆಯುರ್ವೇದದಲ್ಲಿ ರಸಾಯನವೆಂದು ಕರೆಯುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.
ರಸಾಯನ ಶಾಸ್ತ್ರ ಆಯುರ್ವೇದದ ಅಷ್ಟಾಂಗಗಳಲ್ಲಿ ಒಂದು. ರಸಾಯನ ಎಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುವಂಥದ್ದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥದ್ದು. ರೋಗ ಬಾರದಂತೆ ತಡೆಯುತ್ತದೆ ಕೂಡ. ಮಾನಸಿಕ ಆರೋಗ್ಯವನ್ನು ಸಮತೊಲನದಲ್ಲಿಡುತ್ತದೆ. ಇಂದ್ರಿಯ ಶಕ್ತಿಯನ್ನು ವೃಧ್ಧಿಸುತ್ತದೆ. ರಸಾಯನ ನಮ್ಮ ದೇಹವನ್ನು ಜರಾವ್ಯಾಧಿಗಳಿಂದ ರಕ್ಷಿಸಿ ಆಯುಷನ್ನು ವೃದ್ಧಿಸುತ್ತದೆ. ರಸಾಯನ ದ್ರವ್ಯಗಳನ್ನು ದೀರ್ಘಾಯುವಿಗೆ ಮತ್ತು ರೋಗಗಳನ್ನು ದೂರ ಮಾಡಲು ಬಳಸಲಾಗುತ್ತದೆ. ಇದರಲ್ಲಿ ಸಾಮಾನ್ಯವಾಗಿ ಆಮಲಕಿ (ಬೆಟ್ಟದ ನೆಲ್ಲಿಕಾಯಿ), ಅಶ್ವಗಂಧ, ಬ್ರಾಹ್ಮಿ, ಶತಾವರಿ, ಗುಡುಚಿ (ಅಮೃತಬಳ್ಳಿ) ಯಷ್ಟಿಮಧು ಮುಂತಾದವುಗಳು ರಸಾಯನ ದ್ರವ್ಯಗಳು. ಇದರಲ್ಲಿ ತ್ರಿಫಲಾಚೂರ್ಣ, ಬ್ರಾಹ್ಮಿಘೃತ, ವಸಂತ ಕುಸುಮಾಕರ, ಚ್ಯವನ ಪ್ರಾಶ, ಅಗಸ್ತ್ಯ ಹರಿತಕಿ, ಕೆಲವು ಆಯುರ್ವೇದ ರಸಾಯನಗಳು. ಇದನ್ನು ಸೇವಿಸುವ ಮುನ್ನ ತಜ್ಞ ವೈದ್ಯರನ್ನ ಕೇಳಿ ತಿಳಿಯಿರಿ.
ರಸಾಯನದ ಉಪಯೋಗಗಳು
ರಸಾಯನ ದೇಹ ಹಾಗೂ ಮಾನಸಿಕ ಆರೋಗ್ಯಕ್ಕೆ ಹಿತಕಾರಿ. ಕಣ್ಣಿಗೆ ಒಳ್ಳೆಯದು. ಕೂದಲ ಸಮಸ್ಯೆಯನ್ನು ದೂರ ಮಾಡುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಸಾಮರ್ಥ್ಯವನ್ನು ವೃದ್ಧಿಸುತ್ತದೆ.
ಮನೆಯಲ್ಲೇ ಸಿಗುವ ರಸಾಯನಗಳು
ಹಾಲು, ತುಪ್ಪ, ಜೇನುತುಪ್ಪವನ್ನು ನಿತ್ಯ ಸೇವಿಸಬಹುದು. ನೀರನ್ನು ಸರಿಯಾಗಿ ಸೇವಿಸಿದರೆ ಅದು ಕೂಡ ರಸಾಯನವಾಗುತ್ತದೆ. ಅಮೃತಬಳ್ಳಿಯ ಕಷಾಯ ವಾರಕ್ಕೆ ಒಮ್ಮೆ ಸೇವಿಸಿ. ಬ್ರಾಹ್ಮಿಸ್ವರಸ ಬ್ರಾಹ್ಮಿಯ ಎಲೆಯನ್ನು ಜಜ್ಜಿ ಅದರ ರಸವನ್ನು ಹಿಂಡಿ ನಿತ್ಯ ಎರಡು ಚಮಚ ಸೇವಿಸಬಹುದು. ನಿತ್ಯ ಎರಡು ಚಮಚ ಬೆಟ್ಟದ ನೆಲ್ಲಿಕಾಯಿಯ ರಸವನ್ನು ಎರಡು ಚಮಚ ನೀರನ್ನು ಜತೆ ಸೇವಿಸಿ.
ಆಯುರ್ವೇದದಲ್ಲಿ ಹೇಳಿರುವ ದಿನಚರಿಯನ್ನು ಪಾಲಿಸಿ. ಅಭ್ಯಂಗ, ಧ್ಯಾನ, ಯೋಗಾಸನ, ಪ್ರಾಣಾಯಾಮ ಮಾಡುವುದರಿಂದ ಆಯಸ್ಸು ವೃದ್ಧಿ ಆಗುತ್ತದೆ. ಆಯುರ್ವೇದದಲ್ಲಿ ಹೇಳಿರುವಂತಹ ಆಹಾರ ವಿಧಿಯನ್ನು ಅನುಸರಿಸಿ. ಸುಪಾಚ್ಯ ಆಹಾರ ಸೇವನೆ, ಋತುವಿಗೆ ತಕ್ಕಂತೆ ಆಹಾರ ಸೇವನೆ ಮಾಡುವುದು ಒಳ್ಳೆಯದು. ನಮ್ಮ ಜಠರಾಗ್ನಿಯ ಸಾಮರ್ಥ್ಯದ ಮೇಲೆ ಆಹಾರವನ್ನು ಸೇವಿಸಬೇಕು. ನಿತ್ಯ ಒಳ್ಳೆಯ ನಿದ್ರೆ ಆರೋಗ್ಯಕ್ಕೆ ಅತ್ಯಗತ್ಯ. ಇವೆಲ್ಲವನ್ನು ಪಾಲಿಸುವುದರಿಂದ ನಮ್ಮ ಆಯುಷ್ಯ ವೃದ್ಧಿಸುತ್ತದೆ. ರಸಾಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕ.
ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು