ಸಮುದಾಯಕ್ಕೆ ಅಪಚಾರ ಎಂಬ ಆರೋಪ
ಭೋಪಾಲ್: ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಮುಂದಿನ ವರ್ಷ ತೆರೆಗೆ ಬರಲಿರುವ ‘ಪಠಾಣ್’ ಚಿತ್ರದ ಮಾದಕ ಹಾಡಿಗೆ ಕೇಸರಿ ಬಿಕಿನಿ ಧರಿಸಿದ ಕಾರಣಕ್ಕೆ ಹಿಂದು ಸಂಘಟನೆಗಳಿಂದ ಭಾರಿ ವಿರೋಧ ಎದುರಿಸುತ್ತಿರು ಪಠಾಣ್ ಚಿತ್ರಕ್ಕೆ ಈಗ ಮುಸ್ಲಿಮರಿಂದಲೂ ವಿರೋಧ ವ್ಯಕ್ತವಾಗಿದೆ.
ಅಖಿಲ ಭಾರತ ಮುಸ್ಲಿಂ ತೆವ್ಹಾರ್ ಸಮಿತಿ ಎಂಬ ಮುಸ್ಲಿಮ್ ಸಂಘಟನೆ ಚಿತ್ರದ ಶೀರ್ಷಿಕೆ ಮತ್ತು ಅಶ್ಲೀಲ ದೃಶ್ಯಗಳನ್ನು ಬದಲಾಯಿಸಬೇಕು, ಇಲ್ಲದಿದ್ದರೆ ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದೆ. ಕಳೆದೆರಡು ದಿನಗಳಿಂದ ದೇಶದ ನಾನಾಭಾಗಗಳಿಂದ ಅಸಂಖ್ಯಾತ ಫೋನ್ ಕರೆಗಳು ನನಗೆ ಬಂದಿವೆ. ಚಿತ್ರದಲ್ಲಿ ಸಾಕಷ್ಟು ಆಕ್ಷೇಪಾರ್ಹ ದೃಶ್ಯಗಳಿದ್ದು ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಹೇಳಿದೆ.
ಇಂತಹ ಚಿತ್ರಕ್ಕೆ ಪಠಾಣ್ ಎಂದು ಹೆಸರಿಸುವುದು ಪಠಾಣ್ ಕುಲದ ಭಾವನೆಗಳನ್ನು ಅವಮಾನಿಸಿದಂತಿದೆ. ಅದರ ಹೆಸರನ್ನು ಬದಲಾಯಿಸದಿದ್ದರೆ ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಭೋಪಾಲ್ ಮೂಲದ ಸಂಘಟನೆ ಮುಖ್ಯಸ್ಥ ಪೀರ್ಜಾದಾ ಖುರ್ರಂ ಮಿಯಾನ್ ಚಿಶ್ತಿ ಹೇಳಿದ್ದಾರೆ.
ಶೀಘ್ರದಲ್ಲೇ ಮುಂಬೈ ಮತ್ತು ತೆಲಂಗಾಣದಲ್ಲಿರುವ ನಮ್ಮ ಘಟಕಗಳು ಎಫ್ಐಆರ್ಗಳನ್ನು ದಾಖಲಿಸುವ ಮೂಲಕ ಚಿತ್ರದ ನಿರ್ಮಾಪಕರು ಮತ್ತು ನಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿವೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಚಿತ್ರದಲ್ಲಿ ಶಾರೂಕ್ ಖಾನ್ ನಾಯಕನಾಗಿರುವುದು ನಮಗೆ ಮುಖ್ಯವಲ್ಲ, ಚಿತ್ರದ ಬಗ್ಗೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಎಐಎಂಟಿಸಿ ಮುಖ್ಯಸ್ಥರು ಹೇಳಿದ್ದಾರೆ.