ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಒಟ್ಟು ಕಟ್ಟಡಗಳ ಪೈಕಿ 23 ಕಟ್ಟಡಗಳೇ ಅನಧಿಕೃತ. ಈ 23 ಕಟ್ಟಡಗಳಲ್ಲಿರುವ 37 ಅಂಗಡಿಗಳು ಕೂಡ ಅನಧಿಕೃತ.
ಕೆದಂಬಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ಬಂದ ಅಂಶವಿದು.
ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ ಮಾತನಾಡಿ, ಅಂಗಡಿ ಪರವಾನಿಗೆ ನವೀಕರಣ ಹಾಗೂ ಅನಧಿಕೃತ ಅಂಗಡಿಗಳಿಗೆ ದಂಡನೆ ವಿಚಾರದಲ್ಲಿ ಅಂಗಡಿಯವರು ದಂಡ ಕಟ್ಟುತ್ತಿಲ್ಲ. ಇನ್ನೊಂದೆಡೆ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕೃತ ಅಂಗಡಿದಾರರು ಗ್ರಾಮ ಪಂಚಾಯತಿಗೆ ಒತ್ತಡ ಹಾಕುತ್ತಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯತ್ ಆಡಳಿತ ಏನು ಕ್ರಮ ಕೈಗೊಳ್ಳುವುದು ಎಂದು ಪ್ರಶ್ನಿಸಿದರು.
ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಈ ವಿಷಯಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ಕುಮಾರ್ ರೈ, ಗ್ರಾ.ಪಂ. ವ್ಯಾಪ್ತಿಯಲ್ಲಿ 170 ಅಂಗಡಿಗಳಿಗೆ. ಇದರಲ್ಲಿ 133 ಅಂಗಡಿಗಳಿಗೆ ಪರವಾನಿಗೆ ಪಡೆದುಕೊಳ್ಳಲಾಗಿದೆ. ಇದರಲ್ಲಿ 62 ಮಂದಿ ಪರವಾನಿಗೆ ನವೀಕರಿಸಿದ್ದು, 51 ಮಂದಿ ಪರವಾನಿಗೆ ನವೀಕರಿಸಲು ಬಾಕಿ ಇದ್ದಾರೆ. ಇವರಿಗೆ ದಂಡನೆ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಒಟ್ಟು ಕಟ್ಟಡಗಳ ಪೈಕಿ 23 ಕಟ್ಟಡಗಳಲ್ಲಿ 37 ಅನಧಿಕೃತ ಅಂಗಡಿಗಳಿವೆ. ಇವರೂ ಕೂಡ ತಕ್ಷಣದಲ್ಲಿ ಪರವಾನಿಗೆ ನವೀಕರಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೂ ಪರವಾನಿಗೆ ಕಡ್ಡಾಯ
ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಕೂಡ ಪಂಚಾಯತ್‌ನಿಂದ ಪರವಾನಿಗೆ ಪಡೆದುಕೊಳ್ಳುವುದು ಅಗತ್ಯ. ಆದ್ದರಿಂದ ಪರವಾನಿಗೆ ಪಡೆದುಕೊಳ್ಳದೇ ಇರುವವರು, ತಕ್ಷಣವೇ ಪಡೆದುಕೊಳ್ಳಬೇಕು ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಮನವಿಗೆ ಬೆಲೆ ನೀಡದ ಸರ್ಕಾರಿ ಇಲಾಖೆಗಳು!
ಪಂಚಾಯತ್‌ನಿಂದ ಇಲಾಖೆಗಳಿಗೆ ಮಾಹಿತಿಗಾಗಿ ಕಳುಹಿಸುವ ಮನವಿಗಳಿಗೆ ಇಲಾಖೆಗಳು ಪ್ರತ್ಯುತ್ತರ ನೀಡದೆ ನಿರ್ಲಕ್ಷ್ಯ ಮಾಡುತ್ತಿವೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿ, ಗ್ರಾಮಸ್ಥರ ಸಮಸ್ಯೆ, ತೊಂದರೆಗಳ ಬಗ್ಗೆ ಮಾಹಿತಿ ಕೇಳಿ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಪಂಚಾಯತ್‌ನಿಂದ ಮನವಿ ಮಾಡಲಾಗುತ್ತಿದೆ ಆದರೆ ಪಂಚಾಯತ್‌ನ ಮನವಿಗೆ ಇಲಾಖೆಗಳು, ಅಧಿಕಾರಿಗಳು ಯಾವುದೇ ಪ್ರತ್ಯುತ್ತರ ನೀಡುತ್ತಿಲ್ಲ ಎಂದು ಆಪಾದಿಸಿದರು.