ಜಿಪಂ, ತಾಪಂ ಚುನಾವಣೆ ವಿಳಂಬಿಸಿದ್ದಕ್ಕೆ ತರಾಟೆ
ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಕರ್ನಾಟಕದ ಪಂಚಾಯತ್ ರಾಜ್ ಡಿಲಿಮಿಟೇಷನ್ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮೀಸಲಾತಿ ಹಾಗೂ ಡೀಲಿಮಿಟೇಷನ್‌ನ ಸಂಪೂರ್ಣ ಪ್ರಕ್ರಿಯೆಯನ್ನು ಫೆ.1, 2023ರ ವೇಳೆಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಗಡು ವಿಧಿಸಿದೆ. ನ್ಯಾ. ಪ್ರಸನ್ನ ಬಿ. ವರಾಳೆ, ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ಪ್ರಕಟಿಸಿದ್ದು, ರಾಜ್ಯ ಚುನಾವಣಾ ಆಯೋಗ (ಎಸ್ಇಸಿ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಡಿಲಿಮಿಟೇಷನ್ ಆಯೋಗ ಸಲ್ಲಿಸಿದ್ದ ಇಂಪ್ಲೀಡಿಂಗ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಚುನಾವಣೆ ಹಾಗೂ ಇತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ಎರಡು ಬಾರಿ 12 ವಾರಗಳ ಸಮಯ ನೀಡಲಾಗಿತ್ತು. 12 ವಾರಗಳಲ್ಲಿ ಒಂದು ಇಂಚಿನ ಬೆಳವಣಿಗೆಯೂ ಆಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.