ಬಹುಮಾನ ಮೊತ್ತವನ್ನು 20 ಸಾವಿರದಿಂದ 5 ಲಕ್ಷಕ್ಕೇರಿಸಿದ ಸರಕಾರ
ಬೆಂಗಳೂರು: ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡುವವರಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು 20 ಸಾವಿರದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಗೃಹ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಭದ್ರತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ, ಮಾದಕ ವಸ್ತು ಹಾಗೂ ಆಯುಧ ಕಳ್ಳಸಾಗಣೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಘೋಷಿತ ಅಪರಾಧಿಗಳ ಬಗ್ಗೆ ಮಾಹಿತಿ ನೀಡಿ ಪೊಲೀಸರಿಗೆ ನೆರವಾಗುವವರಿಗೆ 20 ಸಾವಿರ ರೂ. ನಗದು ಬಹುಮಾನ ನೀಡಲು ಅವಕಾಶವಿತ್ತು. ಇದೀಗ ಅದನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಪೊಲೀಸ್ ಮಾಹಿತಿದಾರರಿಗೆ 20 ಸಾವಿರ ರೂ.ವರೆಗೆ ಮಾತ್ರ ಬಹುಮಾನ ನೀಡಲು ಅವಕಾಶ ಇರುವುದರಿಂದ ಹೆಚ್ಚಿನ ಜನ ಪೊಲೀಸ್ ಇಲಾಖೆಯ ಮನವಿಗೆ ಸ್ಪಂದಿಸುವುದಿಲ್ಲ. ಅದನ್ನು 5 ಲಕ್ಷಕ್ಕೇರಿಸಲು ಅವಕಾಶ ಕಲ್ಪಿಸಬೇಕು. ಆಗ ತ್ವರಿತವಾಗಿ ಆರೋಪಿಗಳನ್ನು ಬಂಧಿಸಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು 2021ರ ಡಿಸೆಂಬರ್‌ನಲ್ಲಿ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು. ಗೃಹ ಇಲಾಖೆಯು ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಕಳುಹಿಸಿತ್ತು.