ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರರ ಟೆಕ್‌ ಪಾರ್ಕ್‌ : ಬಿಜೆಪಿ ತಿರುಗೇಟು

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಬಿಜೆಪಿ ಸಂಚು ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕೆಂಡಾಮಂಡಲ

ಬೆಂಗಳೂರು: ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಮಾಡಿಸಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಬಿಜೆಪಿ ಕಿಡಿಕಿಡಿಯಾಗಿದೆ. ಚುನಾವಣೆ ಹೊಸ್ತಿಲಲ್ಲಿ ಉಗ್ರಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿವಕುಅಮರ್‌ ನಡೆ ಒಂದೆಡೆ ಕಾಂಗ್ರೆಸ್‌ಗೂ ಮುಜುಗರವುಂಟು ಮಾಡಿದೆ.
ಮತದಾರರ ಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯದ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಮಾಡಿಸಿದೆ ಎಂದು ಶಿವಕುಮಾರ್‌ ಹೇಳಿದ್ದಾರೆ. ಮತ ಮಾಹಿತಿ ಕಳವು ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ ತಂದರು. ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿಪಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದರು. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
ಈ ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಸರಣಿ ಟ್ವೀಟ್​ ಮಾಡುವ ಮೂಲಕ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಕುಕ್ಕರ್ ಸ್ಫೋಟದ ಭಯೋತ್ಪಾದಕ ಪ್ರಕರಣವನ್ನು ಭಯೋತ್ಪಾದಕ ಕೃತ್ಯ ಎಂದು ಡಿಜಿಪಿಯವರು ತನಿಖೆಯ ಆಧಾರದಲ್ಲಿ ಘೋಷಿಸಿದರೆ. ಆದರೆ ಡಿ.ಕೆ. ಶಿವಕುಮಾರ್​ ಕೆಂಡಾಮಂಡಲವಾಗಿದ್ದಾರೆ. ಉಗ್ರನನ್ನು ಉಗ್ರ ಎನ್ನದೆ ಡಿಕೆಶಿಯವರ ಹಾಗೆ ನಮ್ಮ ಬ್ರದರ್ಸ್ ಎನ್ನಬೇಕಿತ್ತೇನು? ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಉಗ್ರರ ಪರ ನಿಲ್ಲುತ್ತಿದೆ ಎಂದು ವಾಗ್ದಾಳಿ ಮಾಡಿದೆ.
ಸ್ಫೋಟದ ಬಳಿಕ ಎನ್​ಐಎ ಪ್ರಕರಣವನ್ನು ತೀವ್ರಗತಿಯಲ್ಲಿ ಪರಿಗಣಿಸಿ ಡಿಕೆಶಿ ‘ಬ್ರದರ್’‌ನನ್ನು ಬಂಧಿಸಿದ ನಂತರ ಉಗ್ರಗಾಮಿ ಸಂಘಟನೆಗಳು ನೇರವಾಗಿ ಬೆಂಬಲ ಘೋಷಿಸಿದ್ದೂ ಅಲ್ಲದೇ ‘ನಮ್ಮ ಹುಡುಗ ಯಶಸ್ವಿಯಾಗಿದ್ದಾನೆ’ ಎಂದು ಹೇಳಿಕೆ‌ ನೀಡಿತ್ತು. ಇದು ಉಗ್ರವಾದವಲ್ಲವೇ ಎಂದು ಪ್ರಶ್ನಿಸಿದೆ. ಉಗ್ರಗಾಮಿಗಳೇ‌ “ಉಗ್ರ ನಮ್ಮವನು” ಎಂದು ಅಬ್ಬರಿಸಿದರೂ ಡಿ.ಕೆ. ಶಿವಕುಮಾರ್​ ಒಪ್ಪಿಕೊಳ್ಳದಿರುವುದು ಯಾಕಾಗಿ? ಒಂದು ಸಮುದಾಯದಿಂದ ಸಿಗುವ ನಾಲ್ಕು ಮತಗಳಿಗಾಗಿ ಉಗ್ರನನ್ನೇ‌ ಉಗ್ರನಲ್ಲ ಎನ್ನುವ ಹಂತದಲ್ಲಿ ಕಾಂಗ್ರೆಸ್ ‌ಇದೆ ಎಂದರೆ‌ ಇವರಿಗೆ ಅಧಿಕಾರ ಕೊಟ್ಟರೆ ಉಗ್ರರ ಟೆಕ್ ಪಾರ್ಕ್‌ನ್ನೇ ನಿರ್ಮಿಸಿದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಹರಿಹಾಯ್ದಿದೆ.
ಕಾಂಗ್ರೆಸ್ ಇಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ್ದೆಲ್ಲವೂ ಇಂಥದ್ದೆ. ನಿಜವಾದ ಉಗ್ರರನ್ನು ಬಚ್ಚಿಟ್ಟು, ಹಿಂದೂಗಳ ಮೇಲೆಯೇ ಉಗ್ರರು ಎಂದು ಸುಳ್ಳು ಕೇಸ್ ಹಾಕುತ್ತಾ ಕುಳಿತಿದ್ದಕ್ಕೇ ಅಲ್ಲವೇ ಮುಂಬೈ ತಾಜ್ ಮೇಲೆ‌ ಉಗ್ರರ ದಾಳಿಯಾಗಿದ್ದು? ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸವಿದ್ದಿದ್ದು? ಮಂಗಳೂರು ಕುಕ್ಕರ್ ಸ್ಪೋಟವನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷರು ತಮ್ಮದು ಭಯೋತ್ಪಾದನಾ ಸಮರ್ಥಕರ ಪಕ್ಷ ಎಂದು ಘೋಷಿಸಿಕೊಂಡಿದೆ. ಚುನಾವಣೆ ಸಮೀಪಿಸಿದಾಗ ಭಾವನಾತ್ಮಕ ಸಂಗತಿಗಳ ಹರಡುವಿಕೆ ಎನ್ನುವ ಡಿಕೆಶಿಯವರು, ದೇಶದ ಭದ್ರತೆಗೆ ಕಂಟಕ ತರುವ ಹೇಳಿಕೆ ನೀಡಿದ್ದಾರೆ.
ಮಂಗಳೂರು ಕುಕ್ಕರ್ ಸ್ಫೋಟವನ್ನು ಇಡೀ ಸಮಾಜ ಖಂಡಿಸಿದೆ. ಮುಸಲ್ಮಾನ ಸಮಾಜವೂ ಅದನ್ನು ಖಂಡಿಸಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಆ ಮೂಲಕ ತಾವು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದರ ಮುನ್ಸೂಚನೆಯನ್ನು ನೀಡಿದ್ದಾರೆ. ಸರ್ಜಿಕಲ್ ಸ್ಟ್ರೈಕನ್ನು ಅಲ್ಲಗೆಳೆದರು, ಏರ್ ಸ್ಟ್ರೈಕನ್ನು ಅಲ್ಲಗೆಳೆದರು, ಪುಲ್ವಾಮಾ ದಾಳಿಯನ್ನು ಪಾಕಿಸ್ಥಾನದ್ದಲ್ಲ ಎಂದು ಸಮರ್ಥಿಸಿಕೊಂಡರು. ದೇಶದಲ್ಲಿ ನಡೆದ ಬಹುತೇಕ ಭಯೋತ್ಪಾದನಾ ಘಟನೆಗಳನ್ನೂ ಸಮರ್ಥಿಸಿಕೊಂಡರು. ಕಾಂಗ್ರೆಸ್ ಏನನ್ನು ಹೇಳಲು ಹೊರಟಿದೆ? ಭಯೋತ್ಪಾದಕರನ್ನು ಭಯೋತ್ಪಾದಕೆನ್ನಲು ಕಾಂಗ್ರೆಸಿಗೇಕೆ ಭಯ? ಕಾಂಗ್ರೆಸ್ ಆಡಳಿತಾವಧಿಯಲ್ಲಿ ಉಗ್ರ ಯಾಸಿನ್ ಮಲಿಕ್‌ಗೆ ಪ್ರಧಾನಿಗಳ ಕಚೇರಿಯವರೆಗೂ ಸಂಪರ್ಕ-ಸಂಬಂಧ-ಬಾಂಧವ್ಯವಿತ್ತು‌. ಕಾಂಗ್ರೆಸ್ ಸರ್ಕಾರವಿಲ್ಲದಿರುವ ಈಗ ಪೊಲೀಸರು ಉಗ್ರರು ಯಾರು ಎಂದು ಡಿಕೆಶಿಯವರನ್ನು ಕೇಳಿ ನಿರ್ಧರಿಸಬೇಕೆಂದರೆ, ಅಧಿಕಾರವಿದ್ದಾಗ ಎಷ್ಟು ಉಗ್ರರನ್ನು ಧರ್ಮ ಪ್ರಚಾರಕರನ್ನಾಗಿಸಿರಬಹುದು? ಓಲೈಕೆ ರಾಜಕಾರಣದ ಕುಳಿಗೆ ಬಿದ್ದ ಕಾಂಗ್ರೆಸಿಗೆ ಸ್ವತಃ ತಾನೇ ಕುಳಿಗೆ ಬಿದ್ದಿದೆ. ಕುಕ್ಕರ್ ಬಾಂಬ್ ಸ್ಪೋಟವನ್ನು ಸಮರ್ಥಿಸುವ ಮೂಲಕ ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗ ಮಾಡಲುಹೊರಟಿದೆ. ಮುಂದಿನ ಚುನಾವಣೆಯಲ್ಲಿ “ಸ್ಪೋಟಕ್ಕೆ ಬೆಂಬಲ”, “ಸ್ಪೋಟಕ್ಕೆ ಸಮರ್ಥನೆ” ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದರೂ ಆಶ್ಚರ್ಯವಿಲ್ಲ ಎಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top