ಸಂಕ್ರಾಂತಿ ನಂತರ ಅಡಿಕೆ ಮಾರುಕಟ್ಟೆ ಚೇತರಿಕೆ ಸಂಭವ: ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ

ಪುತ್ತೂರು: ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಅಡಿಕೆ ಬೆಳೆ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಅಡಿಕೆಯ ಅಭಾವ ತೀವ್ರ ರೀತಿಯಲ್ಲಿ ಮಾರುಕಟ್ಟೆಯನ್ನು ಕಾಡಲಿದೆ. ಹಬ್ಬದ ನಂತರ ಮಾರುಕಟ್ಟೆ ಚೇತರಿಕೆ ಕಾಣುವ ಎಲ್ಲಾ ಲಕ್ಷಣಗಳು ಇರುವುದಾಗಿ ಅಡಿಕೆ ಮಾರುಕಟ್ಟೆ ತಜ್ಞರ ಅಭಿಪ್ರಾಯ. ರೈತರು ಗಾಳಿ ಸುದ್ಧಿ ಮತ್ತು ಖಾಸಗಿ ವರ್ತಕರ ಬೆದರಿಕೆಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ರೈತರು ಹಣದ ಅವಶ್ಯಕತೆ ಇರುವಷ್ಟೇ ಅಡಿಕೆ ಮಾರಾಟ ಮಾಡುವುದರ ಮೂಲಕ ಮಾರುಕಟ್ಟೆಯಲ್ಲಿ ಆಗಬಹುದಾದ ಚೇತರಿಕೆಯ ಲಾಭದ ಸದುಪಯೋಗಪಡೆಯಬಹುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಗೂ ಮೇಲ್ಪಟ್ಟು ಚಾಲಿ ಅಡಿಕೆ ಉತ್ತರ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರವಾನೆ ಆಗಿರುವುದಿಲ್ಲ. ಇದರಿಂದ ಅಲ್ಲಿ ಚಾಲಿ ಅಡಿಕೆ ದಾಸ್ತಾನು ಅಗತ್ಯಕ್ಕಿಂತ ತುಂಬಾ ಕಡಿಮೆಯಾಗಿದೆ. ಸಹಕಾರಿ ಸಂಘಗಳ ನಿರಂತರ ಅನುಸರಣಾ ಕ್ರಮಗಳಿಂದಾಗಿ ಕನಿಷ್ಠ ಆಮದು ಬೆಲೆಯನ್ನು ಹೆಚ್ಚಿಸಿ ಆದೇಶ ಹೊರಡಿಸುವಂತೆ, ವಾಣಿಜ್ಯ ಸಚಿವಾಲಯದಿಂದ ಕೃಷಿ ಸಚಿವಾಲಯಕ್ಕೆ ಶಿಫಾರಸ್ಸನ್ನು ಕಳುಹಿಸಲಾಗಿದೆ. ಶೀಘ್ರ ಆದೇಶ ನೀಡುವುದಾಗಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರು ಆಶ್ವಾಸನೆ ನೀಡಿದ್ದಾರೆ. ಕೇಂದ್ರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಿದೇಶಿ ಅಡಿಕೆಯ ಆಮದಿಗೆ ತಡೆ ಬಿದ್ದಿದೆ. ಅದಕ್ಕಾಗಿ ಕ್ಯಾಂಪ್ಕೊ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ. ಸಂಕ್ರಾಂತಿ ಹಬ್ಬದ ನಂತರ ಚಳಿ ಕಡಿಮೆಯಾಗಿ ಬೇಡಿಕೆ ಉತ್ತಮಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕೊಡ್ಗಿ ತಿಳಿಸಿದ್ದಾರೆ.

ಚಾಲಿ ಅಡಿಕೆಗೆ ಉತ್ತರ ಭಾರತದಿಂದ ಉತ್ತಮ ಬೇಡಿಕೆ:































 
 

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿನ ಚುನಾವಣೆ ಮತ್ತು ಈಗ ವಿಪರೀತ ಚಳಿಯ ವಾತಾವರಣದಿಂದಾಗಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ. ಚಳಿಗಾಲದಲ್ಲಿ ದಾಸ್ತಾನಿನ ಸಮಸ್ಯೆಗಳನ್ನು ಎದುರಿಸುವುದರಿಂದ ಸಾಮಾನ್ಯವಾಗಿ ಪಾನ್ ಮಸಾಲ ಕಂಪೆನಿಗಳು ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆಯನ್ನು ಮಾಡುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಅಡಿಕೆಗೆ ಬೇಡಿಕೆ ಕುಸಿಯುವುದು ಸಾಮಾನ್ಯ. ಇದರ ಪರಿಣಾಮ ಕರಾವಳಿ ಭಾಗದ ಚಾಲಿ ಅಡಿಕೆಯ ಮಾರುಕಟ್ಟೆಯನ್ನೂ ಬಾಧಿಸುತ್ತದೆ. ಕಳೆದ ಒಂದು ತಿಂಗಳಿಂದ ತೀವ್ರ ಕುಸಿತ ಕಂಡಿದ್ದ ಕೆಂಪಡಿಕೆ ದರ ಎರಡು ದಿನಗಳಿಂದ ಚೇತರಿಸಿಕೊಳ್ಳುತ್ತಿದೆ ಮತ್ತು ಉತ್ತರ ಭಾರತದ ವರ್ತಕರಿಂದ ಉತ್ತಮ ಬೇಡಿಕೆಗಳು ಬರುತ್ತಿವೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top