ಪುತ್ತೂರು: ಸರ್ಕಾರಿ ಯೋಜನೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಕಾರ್ಯಕ್ರಮ ನಡೆಸುವುದರಿಂದ ಜನರಿಗೆ ಮಾಹಿತಿ ತಿಳಿದುಕೊಳ್ಳುವ ಜೊತೆಗೆ, ಆ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ಪುತ್ತೂರು ಸೀರತ್ ಕಮಿಟಿಯ ವತಿಯಿಂದ ಮಂಗಳವಾರ ಪುತ್ತೂರಿನ ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ತಾಲೂಕಿನ ಮುಸ್ಲಿಂ ಜಮಾಅತಿನ ಪದಾಧಿಕಾರಿಗಳಿಗೆ ಮತ್ತು ಖತೀಬರುಗಳಿಗೆ `ಸರ್ಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.
ನರೇಗಾ ಸೇರಿದಂತೆ ಸರ್ಕಾರದಿಂದ ಜನರಿಗಾಗಿ ಹಲವಾರು ಯೋಜನೆಗಳು ಲಭ್ಯವಿದೆ. ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜನರಿಗಾಗಿ ಜಾರಿಗೊಳಿಸುತ್ತಿದೆ. ಇದರ ಬಗ್ಗೆ ಎಲ್ಲರೂ ಮಾಹಿತಿ ಅರಿತುಕೊಳ್ಳುವುದು ಅವಶ್ಯಕವಾಗಿದೆ. ಅದಕ್ಕಾಗಿ ಇಂತಹ ಮಾಹಿತಿ ಶಿಬಿರಗಳು ಪೂರಕವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ಅಳವಡಿಸಿಕೊಂಡು ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುರ‍್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಿದರು. ಪುತ್ತೂರು ತಾಲೂಕು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕ ಗಣಪತಿ ಹೆಗ್ಡೆ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಪುತ್ತೂರಿನ ಮಾಹಿತಿ ಕೇಂದ್ರದ ಮುಖ್ಯಸ್ಥ ಮಹಮ್ಮದ್ ರಫೀಖ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಹಾಜಿ ಕಲ್ಲೇಗ, ಕರ್ನಾಟಕ ಮುಸ್ಲಿಂ ಜಮಾಅತ್‌ನ ಗೌರವ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಸೀರತ್ ಕಮಿಟಿ ಕೋಶಾಧಿಕಾರಿ ಎಲ್.ಟಿ. ರಝಾಕ್ ಹಾಜಿ, ಅಬ್ದುಲ್ಲಾ ಹಾಜಿ, ರಝಾಕ್ ಪೈಝಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ, ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸೀರತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಿ.ಎ. ಶಕೂರ್ ಹಾಜಿ ಕಲ್ಲೇಗ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಹಾಜಿ ಅಬೂಬಕ್ಕರ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು.