ಪುತ್ತೂರು: ೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಘಟಕದ ಆಶ್ರಯದಲ್ಲಿ ಶತ್ ಶತ್ ನಮನ ವಿಶೇಷ ಕಾರ್ಯಕ್ರಮ ಹವಾಲ್ದಾರ್ ದಿ. ಪರಮೇಶ್ವರ ಕೆ. ಅವರ ದೋಲ್ಪಾಡಿ ಮನೆಯಲ್ಲಿ ನಡೆಯಿತು. ಸೈನಿಕರ ಪರಾಕ್ರಮ, ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಅವರಿಗೆ ಗೌರವ ಅರ್ಪಿಸಲು ಹಾಗೂ ಅವರ ಕುಟುಂಬಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಶತ್ ಶತ್ ನಮನ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
೧೯ ವರ್ಷಗಳ ಹಿಂದೆ ಭೂಸೇನೆಗೆ ಸೇರ್ಪಡೆಗೊಂಡ ಯೋಧ ಪರಮೇಶ್ವರ ಗೌಡ ಅವರು ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಲೇಹ್, ಲಡಾಕ್, ಅಸ್ಸಾಂ, ರಾಜಸ್ಥಾನ, ಸೂರತ್ ಮೊದಲಾದೆಡೆ ಸೇವೆ ಸಲ್ಲಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡರು. ಹುದ್ದೆಯಲ್ಲಿ ಭಡ್ತಿ ಹೊಂದಿ ಜಮ್ಮುವಿನಲ್ಲಿ ಹವಾಲ್ದಾರ್ ಆಗಿನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ ಅವರು, ಕಾಶ್ಮೀರದ ಉಧಂಪುರ ಸಮೀಪದ ಕೆಹರಿ ಎಂಬಲ್ಲಿ ೨೦೦೨ರ ಜೂನ್ ೯ರಂದು ಪಾಕ್ ಸೈನಿಕರ ಶೆಲ್ ದಾಳಿಗೆ ಗುರಿಯಾಗಿ ಹುತಾತ್ಮರಾದರು.
ಈ ಪರಾಕ್ರಮವನ್ನು ಸ್ಮರಿಸುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳ ಪರವಾಗಿ ಶತಶತನಮನಗಳನ್ನೊಳಗೊಂಡ ವಿಶೇಷ ಸ್ಮರಣಿಕೆಯನ್ನು ದಿ| ಪರಮೇಶ್ವರ ಗೌಡ ಕೆ. ಇವರ ಪತ್ನಿ ಕೆ.ಪಿ. ಪುಷ್ಪಾವತಿ ಹಸ್ತಾಂತರಿಸಲಾಯಿತು. ೧೯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಮಡಿಕೇರಿ ಇದರ ಸುಬೇದಾರ್ ಮೇಜರ್ ಮಲ್ಲಿಕಾರ್ಜುನ, ಸುಬೇದಾರ್ ರಾಜುಗುರುಂಗು, ಸಂತ ಫಿಲೋಮಿನಾ ಕಾಲೇಜಿನ ಎನ್. ಸಿ. ಸಿ. ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ ಮತ್ತುಎನ್. ಸಿ. ಸಿ. ಕೆಡೆಟ್‌ಗಳಾದ ಸೀನಿಯರ್ ಅಂಡರ್ ಆಫೀಸರ್ ಸಾತ್ವಿಕ್ ಡಿ.ಎಸ್., ಜೂನಿಯರ್ ಅಂಡರ್ ಆಫೀಸರ್ಸ್ ಸ್ವಸ್ತಿಕ ಕೆ, ಕೃತಿಕೆ ಎನ್., ಕ್ಯಾಡೆಟ್ ರಿಯಾ, ಸಂಜನಾ ಅವರು ಹಸ್ತಾಂತರಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಉಪಸ್ಥಿತರಿದ್ದರು.
ಫೊಟೋ: ಎನ್‌ಸಿಸಿ
ಹುತಾತ್ಮ ಸೈನಿಕ ದಿ. ಪರಮೇರ್ಶವರ ಕೆ. ಅವರ ಪತ್ನಿ ಪುಷ್ಪಾವತಿ ಅವರಿಗೆ ಸ್ಮರಣಿಕೆಯನ್ನು ಹಸ್ತಾಂತರಿಸಲಾಯಿತು.