ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಸಂಜೀವ ಮಠಂದೂರು ಅವರು ಶನಿವಾರ ಬೆಳಿಗ್ಗೆ ಉದ್ಘಾಟಿಸಿದರು.
ಕಜೆ ಎಂಬಲ್ಲಿಗೆ ನೂತನ ಅಂಗನವಾಡಿಯ ಅಗತ್ಯತೆಯನ್ನು ಮನಗಂಡು, ನೂತನ ಅಂಗನವಾಡಿಯನ್ನು ಮಂಜೂರು ಮಾಡುವಲ್ಲಿ ಶಾಸಕರು ಯಶಸ್ವಿಯಾಗಿದ್ದರು. ರಾಜ್ಯ ಸರಕಾರದ ಅನುದಾನದಿಂದ ಅಂಗನವಾಡಿಯ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಶಾಸಕ ಸಂಜೀವ ಮಠಂದೂರು ಅವರ ಕಾರ್ಯವೈಖರಿಯನ್ನು ಮೆಚ್ಚಿರುವ ಸ್ಥಳೀಯರು, ಅಂಗನವಾಡಿ ಉದ್ಘಾಟನಾ ಸಮಾರಂಭದಲ್ಲೇ ಶಾಸಕರನ್ನು ಸನ್ಮಾನಿಸಿ, ಗೌರವ ತೋರಿದರು. ಅಂಗನವಾಡಿ ಸ್ಥಳ ನೀಡಿದ ತಿಮ್ಮಪ್ಪ ಮೂಲ್ಯ ಕಜೆ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಪುತ್ತೂರಿನ ೮ ಅಂಗನವಾಡಿಗಳಿಗೆ ನೂತನ ಕಟ್ಟಡ
ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಈ ಆರ್ಥಿಕ ವರ್ಷದಲ್ಲಿ ೮ ಅಂಗನವಾಡಿಗಳಿಗೆ ನೂತನ ಕಟ್ಟಡ ನಿರ್ಮಾಣ ಮಾಡಿದ್ದು, ಎಲ್ಲವೂ ಆರ್‌ಸಿಸಿ ಕಟ್ಟಡಗಳೇ ಆಗಿವೆ. ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಸುಮಾರು ೧೦ರಿಂದ ೧೨ ಲಕ್ಷ ರೂ. ವೆಚ್ಚದಲ್ಲಿ ಉತ್ತಮ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಅಂಗನವಾಡಿಗಳಿಗೆ ೧೬ ಲಕ್ಷ ರೂ. ವಿನಿಯೋಗಿಸಿದ್ದೂ ಇದೆ. ಒಂದು ಗ್ರಾಮಕ್ಕೆ ೫, ೧೦ ಕೋಟಿ ರೂ. ಅನುದಾನ ಬರಲು ಸಾಧ್ಯವೇ ಎಂದು ಕುತೂಹಲದಿಂದ ಪ್ರಶ್ನಿಸುವ ಈ ಸಂದರ್ಭದಲ್ಲಿ, ಅದು ಸಾಧ್ಯ ಎನ್ನುವುದನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದೇವೆ ಎಂದು ವಿಶ್ವಾಸದಿಂದ ನುಡಿದರು.
ಅಂಗನವಾಡಿಗಳಿಗೆ ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಲಭ್ಯ ನೀಡುವ ಹಿನ್ನೆಲೆಯಲ್ಲಿ ಬೇರೆ ಬೇರೆ ಯೋಜನೆಗಳನ್ನು ಬಳಸಿಕೊಂಡಿದ್ದೇವೆ. ವಿಧಾನಸಭಾ ಕ್ಷೇತ್ರದ ೨೧೫ ಅಂಗನವಾಡಿಗಳಿಗೂ ಮೂಲಭೂತ ಸೌಲಭ್ಯ ನೀಡಲಾಗಿದೆ. ಇಂತಹ ಕಾರ್ಯ ಜಿಲ್ಲೆಯ ಯಾವ ಭಾಗದಲ್ಲೂ ಆಗಿಲ್ಲ. ಸರಕಾರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತದೆ. ಹಾಗಿರುವಾಗ ಅವರಿಗೆ ಶುದ್ಧ ಕುಡಿಯುವ ನೀರು ನೀಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ೫೦ ಸಾವಿರ ರೂ. ವೆಚ್ಚದ ಆರ್‌ಓ ಪ್ಲಾಂಟ್‌ಗಳನ್ನು ಶಾಲಾ – ಅಂಗನವಾಡಿಗಳಲ್ಲಿ ನಿರ್ಮಾಣ ಮಾಡಿದ್ದೇವೆ. ಇದಕ್ಕಾಗಿ ಸುಮಾರು ೫ ಕೋಟಿ ರೂ. ಅನುದಾನ ಬಳಸಿಕೊಂಡು, ಈ ವಿಶಿಷ್ಟ ಯೋಜನೆಯನ್ನು ಅಳವಡಿಸಿಕೊಂಡಿದ್ದೇವೆ ಎಂದರು.
ಅಂಗನವಾಡಿ ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಗಣಹೋಮ ನಡೆಯಿತು. ಶನಿವಾರ ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಅವರು ಅಂಗನವಾಡಿ ಕಟ್ಟಡವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಅಂಗನವಾಡಿ ಪುಟಾಣಿಗಳು ಉದ್ಘಾಟಿಸಿದರು.
ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬನ್ನೂರು ಗ್ರಾ.ಪಂ. ಅಧ್ಯಕ್ಷೆ ಜಯ, ಅಂಗನವಾಡಿ ಮೇಲ್ವಿಚಾರಕಿ ಹರಿಣಾಕ್ಷಿ ಬಿ., ಪಿಡಿಓ ಚಿತ್ರಾವತಿ, ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡೆನ್ನಿಸ್ ಮಸ್ಕರೇನ್ಹಸ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವ್ಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪುಷ್ಪಲತಾ, ಕುಂಟ್ಯಾನ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಶ್ರೀ ದುರ್ಗಾ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಕುಲಾಲ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ರೈ ಪಿ., ಗ್ರಾಪಂ ಮಾಜಿ ಅಧ್ಯಕ್ಷೆ ರಮಣಿ ಗಾಣಿಗ, ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಅಡೆಕ್ಕಿಲಡ್ಕ ಸದಾಶಿವ ಕಾಲನಿ ಅಧ್ಯಕ್ಷ ಸುಬ್ರಹ್ಮಣಿ ಮೊದಲಾದವರು ಉಪಸ್ಥಿತರಿದ್ದರು.ರತ್ನಾಕರ ಪ್ರಭು ಕಂಜೂರು ಪ್ರಾಸ್ತಾವಿಕವಾಗಿ ಮಾತನಾಡಿದರು.