ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.
ಉಪ್ಪಿನAಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಉದ್ಘಾಟಿಸಿ ಮಾತನಾಡಿ, ಒಂದು ಹಣತೆಯಿಂದ ಸಾವಿರಾರು ಹಣತೆಗಳನ್ನು ಹಚ್ಚಬಹುದು. ಹಾಗೆಯೇ ನಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿದಲ್ಲಿ ಮಾತ್ರ ಅದು ವೃದ್ಧಿಯಾಗುತ್ತದೆ. ಜ್ಞಾನವನ್ನು ತಲೆಯಲ್ಲಿಟ್ಟು ಮೆರೆಯದೆ ಹೃದಯದಲ್ಲಿಟ್ಟು ವಿನಮ್ರವಾಗಿ ನಡೆದುಕೊಂಡರೆ ಜೀವನ ಸಾರ್ಥಕವಾಗುವುದು. ನಾಯಕರು ಅನುಯಾಯಿಗಳನ್ನು ಸೃಷ್ಠಿಸುವ ಬದಲು ನಾಯಕರನ್ನು ಸೃಷ್ಠಿಸಬೇಕು. ವ್ಯಕ್ತಿಗಳನ್ನು ಹಾಗೂ ವ್ಯಕ್ತಿತ್ವಗಳನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾಸಂಸ್ಥೆಗಳು ಮಹತ್ತರ ಪಾತ್ರ ವಹಿಸುತ್ತವೆ. ಯುವಕರು ಒಂದು ಹೆಜ್ಜೆ ಮುಂದೆ ಇಡುವ ಮುನ್ನ ಇಟ್ಟ ಹೆಜ್ಜೆ ಸರಿಯಾಗಿದೆಯೇ ಎಂದು ಪರಾಮರ್ಶಿಸಬೇಕು. ಬದುಕಿನ ಜಂಜಾಟಗಳ ನಡುವೆ ನಮಗೆ ಬರಬಹುದಾದ ಅದ್ಭುತ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ಅಧ್ಯ÷ಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಜೆರೋಮ್ ಲಾರೆನ್ಸ್ ಮಸ್ಕರೇಞಸ್, ವಿದ್ಯಾರ್ಥಿ ಸಮೂಹಕ್ಕೆ ಒಳಿತನ್ನು ಮಾಡಲು ನಾಯಕರನ್ನು ಚುನಾಯಿಸಲಾಗಿದೆ. ನೀವು ಯಾರಾದರೊಬ್ಬ ವ್ಯಕ್ತಿಯನ್ನು ಪ್ರೀತಿಸಿದಲ್ಲಿ ಅವರ ಒಳಿತು ಹಾಗೂ ಸಂತೋಷಕ್ಕಾಗಿ ಸದಾ ಶ್ರಮಿಸುತ್ತೀರಿ. ನಿಮ್ಮ ಹೆತ್ತವರನ್ನು ಪ್ರೀತಿಸಿದಂತೆಯೇ ಕಲಿತ ವಿದ್ಯಾಸಂಸ್ಥೆಯನ್ನೂ ಪ್ರೀತಿಸಿರಿ. ನಾಯಕರು ತಮ್ಮ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿದಲ್ಲಿ ಸಂಸ್ಥೆಯನ್ನು ಸುಲಭವಾಗಿ ಮುನ್ನಡೆಸಬಹುದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇಞಸ್, ವಿದ್ಯಾರ್ಥಿ ಸಂಘದ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಹಿರಿಯವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಜಗಜೀವನ್ ದಾಸ್ ರೈ ಶುಭಹಾರೈಸಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಪ್ರೌಢಶಾಲಾ ಮುಖ್ಯಶಿಕ್ಷಕಿ ಕಾರ್ಮಿನ್ ಪಾಯಸ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ವಿ.ಜೆ. ಫೆರ್ನಾಂಡಿಸ್, ಕ್ಸೇವಿಯರ್ ಡಿಸೋಜ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ., ಭಾರತಿ ಎಸ್. ರೈ ಉಪಸ್ಥಿತರಿದ್ದರು.
ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ನಾಯಕ ಮಹಮ್ಮದ್ ಆಶಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಅನುಶ್ರೀ ಅತಿಥಿಗಳನ್ನು ಪರಿಚಯಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿ ಜೋನ್ ವಿಸ್ಟನ್ ಟೈಟಸ್ ಡಯಾಸ್ ಅತಿಥಿಗಳನ್ನು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶಿವಾನಿ ವಂದಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿ ನಿರಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.