ಪುತ್ತೂರು: ಗ್ರಾಮೀಣ ಭಾಗದ ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಉಚಿತವಾಗಿ ನಾಟಿಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ನೂರಿನ್ನೂರು ಕೋಳಿಮರಿಗಳನ್ನು ಸಾಕಿಕೊಂಡು, ಜೀವನವನ್ನು ಸುಗಮವಾಗಿ ಸಾಗಿಸಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಗ್ರಾಮೀಣ ಭಾಗದ ಅರ್ಹ ರೈತ ಮಹಿಳೆಯರಿಗೆ ಉಚಿತ ನಾಟಿ ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿದರು.
ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟನಲ್ಲಿ ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ಇದು ಕೂಡ ಒಂದು. ಐವತ್ತು ಸಾವಿರ ಕೋಳಿಮರಿಗಳನ್ನು ಸಾಕಿಕೊಂಡು, ಕುಕ್ಕುಟೋದ್ಯಮ ನಡೆಸುವ ಉದ್ಯಮಿಗಳನ್ನು ನಾವು ಕಾಣುತ್ತೇವೆ. ಆದರೆ ನೂರಿನ್ನೂರು ನಾಟಿ ಕೋಳಿ ಮರಿಗಳನ್ನು ಸಾಕಿಕೊಂಡು ಉದ್ಯಮ ನಡೆಸುತ್ತಾ, ಉತ್ತಮ ಜೀವನ ಸಾಗಿಸಬಹುದು ಎಂದರು.
ಮೈಸೂರು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ ನಿಗಮದ ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಕಚೇರಿ ಸಿಬ್ಬಂದಿ ಅಮೃತ್ ಉಪಸ್ಥಿತರಿದ್ದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಸ್ವಾಗತಿಸಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಪ್ರಸಾದ್ ವಂದಿಸಿದರು.
ಪೌಷ್ಠಿಕತೆ ಹಾಗೂ ರುಚಿಯ ಜತೆಗೆ ರೋಗ ನಿರೋಧಕ ಶಕ್ತಿ ಹೊಂದಿರುವ ನಾಟಿ ಕೋಳಿ ಮರಿಗಳನ್ನು ಸಾಕುವ ಉದ್ದೇಶದಿಂದ ರಾಜ್ಯ ಸರಕಾರದ ಕುಕ್ಕುಟ ಮಹಾ ಮಂಡಳಿ ನಿಗಮ ಬೆಂಗಳೂರು ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ವತಿಯಿಂದ ಕಾರ್ಯಕ್ರಮ ನಡೆಯಿತು.