ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ತನ್ನ ಮೊಬೈಲ್ ಆ್ಯಪ್‌ನ ಆ್ಯಂಡ್ರಾಯ್ಡ್ ಆವೃತ್ತಿ ೨.೦ಕ್ಕೆ ಬುಧವಾರ ಚಾಲನೆ ನೀಡಿದ್ದು, ವಿವಿಧ ಸಚಿವಾಲಯಗಳ ಕಾನೂನು ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ನೈಜ ಸಮಯದಲ್ಲಿ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಬಹುದು.
ದಿನದ ಕಲಾಪಗಳ ಆರಂಭಕ್ಕೆ ಮುನ್ನ ಇದನ್ನು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಆ್ಯಪ್‌ನ ಆ್ಯಂಡ್ರಾಯ್ಡಾ ಆವೃತ್ತಿ ೨.೦ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಐಒಎಸ್ ಆವೃತ್ತಿಯು ಇನ್ನೊಂದು ವಾರದಲ್ಲಿ ಲಭ್ಯವಾಗಲಿದೆ. ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳ ಕಾನೂನು ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಈ ಆ್ಯಪ್ ಮೂಲಕ ಲಾಗಿನ್ ಆಗಿ ನೈಜ ಸಮಯದಲ್ಲಿ ಕಲಾಪಗಳನ್ನು ವೀಕ್ಷಿಸಬಹುದು. ತಾವು ದಾಖಲಿಸಿರುವ ಪ್ರಕರಣಗಳ ಸ್ಥಿತಿಗತಿ, ಆದೇಶಗಳು, ತೀರ್ಪುಗಳು ಮತ್ತು ಪ್ರಕರಣಗಳ ಬಾಕಿಯನ್ನು ಪರಿಶೀಲಿಸಬಹುದು ಎಂದು ತಿಳಿಸಿದರು.
ಈ ಮೊದಲು ಅಸ್ತಿತ್ವದಲ್ಲಿದ್ದ ಮೊಬೈಲ್ ಆ್ಯಪ್ ನ್ಯಾಯಾಲಯ ಕಲಾಪಗಳನ್ನು ವೀಕ್ಷಿಸಲು ನ್ಯಾಯವಾದಿಗಳಿಗೆ ಅನುಕೂಲವನ್ನು ಕಲ್ಪಿಸಿತ್ತು. ಪ್ರಕರಣಗಳ ಸ್ಥಿತಿಗತಿ, ಆದೇಶಗಳು ಮತ್ತು ತೀರ್ಪುಗಳನ್ನೂ ನೋಡುವ ಸೌಲಭ್ಯವನ್ನು ಒದಗಿಸಿತ್ತು.
ಸಾಂಕ್ರಾಮಿಕದ ಸಂದರ್ಭದಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ನ್ಯಾಯಾಲಯದ ವರ್ಚುವಲ್ ಕಲಾಪಗಳನ್ನು ಆ್ಯಪ್ ಮೂಲಕ ವೀಕ್ಷಿಸಲು ಕೆಲವು ಪತ್ರಕರ್ತರಿಗೂ ಅವಕಾಶ ಕಲ್ಪಿಸಿದ್ದರು.