ಹೊಸದಿಲ್ಲಿ: ಕೊರೋನಾ ಬಳಿಕ ಕಂಪೆನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕುತ್ತಿರುವುದು ತಿಳಿದಿರುವ ಸಂಗತಿ. ಇದೇ ಸಾಲಿಗೆ ಇದೀಗ ಅಮೆಝಾನ್ ಕೂಡ ಸೇರುತ್ತಿದೆ. ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ ೨೦ ಸಾವಿರ ಉದ್ಯೋಗಿಗಳನ್ನು ಅಮೆಝಾನ್ ವಜಾಗೊಳಿಸುವ ಸಾಧ್ಯತೆಯ ಬಗ್ಗೆ ಕಂಪ್ಯೂಟರ್ ವರ್ಲ್ಡ್ ವರದಿ ಮಾಡಿದೆ.
ಸಾಂಕ್ರಾಮಿಕದ ಅವಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮಾಡಿಕೊಂಡಿರುವುದರಿAದ ವೆಚ್ಚ ಕಡಿತದ ಭಾಗವಾಗಿ ಅಮೆಝಾನ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಜಗತ್ತಿನಾದ್ಯಂತ ೧.೬ ದಶಲಕ್ಷ ಉದ್ಯೋಗಿಗಳ ಹೊಂದಿರುವ ದೈತ್ಯ ತಂತ್ರಜ್ಞಾನ ಕಂಪನಿ ಅಮೆಝಾನ್, ಹಲವಾರು ವಿಭಾಗಗಳಿಂದ ತನ್ನ ಸಿಬ್ಬಂದಿಗಳನ್ನು ಮನೆಗೆ ಕಳಿಸುವ ಸಾಧ್ಯತೆ ಇದ್ದು, ಈ ಪೈಕಿ ಕಾರ್ಪೊರೇಟ್ ಅಧಿಕಾರಿಗಳು ಹಾಗೂ ತಂತ್ರಜ್ಞಾನ ಸಿಬ್ಬಂದಿಗಳೂ ಒಳಗೊಂಡಿದ್ದಾರೆ.
ಈ ಕ್ರಮದಿಂದ ಕಂಪನಿಯ ಹಲವಾರು ಹಂತಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಈ ಕುರಿತು ಮಾಹಿತಿ ಹೊಂದಿರುವ ಹೆಸರೇಳಲಿಚ್ಛಿಸದ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.