ಶಿಗ್ಗಾಂವ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ ಆಗಲಿದೆ – ಸಿಎಂ ಬೊಮ್ಮಾಯಿ

ಶಿಗ್ಗಾಂವ್ ತಾಲ್ಲೂಕಿನಲ್ಲಿ ಶೀಘ್ರದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಪ್ರಾರಂಭವಾಗುತ್ತದೆ. ಬೇರೆ ಬೇರೆ ತಂತ್ರಜ್ಞಾನದಲ್ಲಿ ಆಧುನಿಕ ತರಬೇತಿ ಕೇಂದ್ರಕ್ಕೆ ಮುಂದಿನ ತಿಂಗಳು ಅದಕ್ಕೆ ಅಡಿಗಲ್ಲು ಹಾಕಲಿದ್ದೇನೆ. ಈ ಮೂಲಕ ಶಿಗ್ಗಾಂವ್ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುವ ಇಚ್ಛೆ ನನ್ನದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಶಿಗ್ಗಾಂವ್ ನೂತನ ಬಸ್ ಘಟಕ ಮತ್ತು ಚಾಲನಾ ಹಾಗೂ ತಾಂತ್ರಿಕ ತರಬೇತಿ ಕೇಂದ್ರದ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.

ಶಿಗ್ಗಾಂವ್ ಗೆ ಬಸ್ ಡಿಪೋ ಆಗಬೇಕೆಂದು ಸುಮಾರು 10 ವರ್ಷದಿಂದ ಬೇಡಿಕೆ ಇತ್ತು. ಇದಕ್ಕಾಗಿ ಮೀಸಲಿಟ್ಟಿದ್ದ ಜಾಗಕ್ಕೂ ಸಮಸ್ಯೆ ಆಗಿತ್ತು. ಅದನ್ನೆಲ್ಲವನ್ನೂ ನಿವಾರಿಸಿ 28 ಕೋಟಿ ವೆಚ್ಚದಲ್ಲಿ ಬಸ್ ಡಿಪೋ ಮತ್ತು ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡುತ್ತಿದ್ದೀವಿ. ಶಿಗ್ಗಾಂವ್ ಸುತ್ತಮುತ್ತ ಅಭಿವೃದ್ಧಿ ಆಗುತ್ತಿರುವುದರಿಂದ ಸಾರಿಗೆ ವ್ಯವಸ್ಥೆ ಸುಗಮವಾಗಿ ಆಗಲು ಇಲ್ಲಿ ಡಿಪೋ ಆಗುವುದು ಅವಶ್ಯಕವಾಗಿತ್ತು. ಇದರಿಂದ ಡಿಪೋ ಆಧಾರಿತ ಕೆಲಸಗಳು ಹೆಚ್ಚಾಗಿ ಈ ಭಾಗದವರಿಗೆ ಸಿಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.































 
 

ಶಿಗ್ಗಾಂವ್ ನಲ್ಲಿ ಈಗಾಗಲೇ ಒಳ್ಳೆಯ ವ್ಯವಸ್ಥೆಯ ಐಟಿಐ ಕಾಲೇಜು ಇದೆ, ಬಂಕಾಪುರದಲ್ಲಿ ಪಾಲಿಟೆಕ್ನಿಕ್ ಕಾಲೇಜು ಇದೆ. ಇದರ ಜತೆ ಇಲ್ಲಿನ ತರಬೇತಿ ಕೇಂದ್ರ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ತಾಂತ್ರಿಕತೆಗೆ ಒತ್ತು ನೀಡಿ ತರಬೇತಿ ಸಿಗುವ ಸಂಸ್ಥೆಗಳನ್ನು ಶಿಗ್ಗಾಂವ್ ತಾಲ್ಲೂಜಿನಲ್ಲಿ ಪ್ರಾರಂಭಿಸುವ ಗುರಿ ನನ್ನದು. ಖಾಸಗೀ ವಲಯದವರೂ ಇಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಸಂಸ್ಥೆ ತೆರೆಯಲು ಉತ್ಸುಕರಾಗಿದ್ದಾರೆ. ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನೂ ನಾವು ಕೊಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಶಿಗ್ಗಾಂವ್ ಗೆ ಅನೇಕ ಉದ್ದಿಮೆಗಳು ಬರಲಿದೆ
ಜೆಸಿಬಿ ಸಂಸ್ಥೆಯ ತರಬೇತಿ ಕೇಂದ್ರವನ್ನು ಶಿಗ್ಗಾಂವ್ ಗೆ ತರುವ ಪ್ರಯತ್ನ ಆಗುತ್ತಿದೆ. ಅದು ಬಂದರೆ ದೊಡ್ಡ ಪ್ರಮಾಣದಲ್ಲಿ ಯುವಕರು ಜೆಸಿಬಿ ವಾಹನ ಚಾಲಕ ತರಬೇತಿ ಪಡೆಯಬಹುದು. ಇದರ ಜತೆಯಲ್ಲಿ ಶಿಗ್ಗಾಂವ್ ಗೆ ಆಟೊಮೊಬೈಲ್ ಉದ್ಯಮಗಳನ್ನು ತರಲು ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿ 350 ಎಂಪಿಎಲ್ಡಿ ಸಾಮರ್ಥ್ಯದ ಬಹುದೊಡ್ಡ ಎಥನಾಲ್ ಉತ್ಪಾದನಾ ಘಟಕ ಪ್ರಾರಂಭವಾಗುತ್ತಿದೆ. ಇದರಿಂದ ರೈತರಿಗೆ ದೊಡ್ಡ ಅನುಕೂಲ ಆಗುತ್ತದೆ. ಟೆಕ್ಸ್ಟೈಲ್ ಪಾರ್ಕ್ ಪ್ರಾರಂಭಿಸುವುದರ ಮೂಲಕ 5 ಸಾವಿರ ಹೆಣ್ಣುಮಕ್ಕಳಿಗೆ ಕೆಲಸ ಸಿಗಲಿದೆ ಎಂದು ಸಿಎಂ ಹೇಳಿದರು.

ಶಾಲಾ ಮಕ್ಕಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಸ್ ಸೌಲಭ್ಯ
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಯುವ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಖಾಸಗೀ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗಾಗಿ ಬಸ್ಗಳನ್ನು ನಡೆಸುವ ಈ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿ ಇದ್ದು ನನ್ನ ಕ್ಷೇತ್ರದಿಂದಲೇ ಇದನ್ನು ಪ್ರಾರಂಭಿಸಬೇಕೆಂಬ ಉದ್ದೇಶ ಇದೆ. ಈ ಮೂಲಕ ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಮಾಡುವ ಪೈಲಟ್ ಯೋಜನೆ ನಮ್ಮ ಕ್ಷೇತ್ರದಲ್ಲಿ ಪ್ರಾರಂಭವಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾರ್ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಸಂಕನೂರ, ವಾಯುವ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top